ಜಂಟಿ ಸಮಾಲೋಚನಾ ಸಭೆ, ಸರ್ಕಾರಿ ನೌಕರರು ಸರ್ಕಾರದ ನಿಯಮಾವಳಿ ಅರಿತು ಕಾರ್ಯನಿರ್ವಹಿಸಬೇಕು

ಸಂಜೆವಾಣಿ ವಾರ್ತೆ
ದಾವಣಗೆರೆ; ಫೆ.22; ಪ್ರತಿಯೊಬ್ಬ ಸರ್ಕಾರಿ ನೌಕರರು ಸರ್ಕಾರದ ಸೇವಾ ನಿಯಮ ಹಾಗೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು ಕೊರತೆಗಳ ಜಂಟಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ನಾವೆಲ್ಲರೂ ಜನಪರ ನಿರ್ಧಾರ ಕೈಗೊಂಡು ಕೆಲಸ ಮಾಡಬೇಕು.  ಸರ್ಕಾರಿ ನೌಕರರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಕ್ರೀಡೆ,  ಮನರಂಜನಾ ಕೂಟಗಳಲ್ಲಿ ಭಾಗವಹಿಸಬೇಕು. ಸರ್ಕಾರಿ ನೌಕರರ ಸಂಘದಿಂದ ಪ್ರಸಕ್ತ ಸಾಲಿನ ಕ್ರೀಡಾ ಕೂಟ ಹಮ್ಮಿಕೊಂಡಿದ್ದು, ಇದರಲ್ಲಿ ವೈಯಕ್ತಿಕ ಕ್ರೀಡೆಗಳು, ಗುಂಪು ಕ್ರೀಡೆಗಳು, ಸಾಂಸ್ಕೃತಿಕ ಸ್ಪರ್ಧೆ ಇರಲಿವೆ. ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು.ಜಿಲ್ಲಾಡಳಿತ ಭವನದಲ್ಲಿ ಅವಧಿ ಮೀರಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸಂಜೆ ಮನೆಗೆ ತೆರಳಲು ಇಲ್ಲಿಂದ ಸಿಟಿ ಬಸ್ ಬಿಡಲು ನೌಕರರು ಮನವಿ ಮಾಡಿದಾಗ ಪ್ರತಿನಿತ್ಯ ಸಂಜೆ 2 ಕೆಎಸ್‍ಆರ್‍ಟಿಸಿ ಸಿಟಿಬಸ್ ಗಳನ್ನು ಬಿಡಲು ಸೂಚಿಸಲಾಗುತ್ತದೆ ಎಂದರು.ವಿವಿಧ ಕಚೇರಿಗಳಿಗೆ ದಾಖಲೆ ಕೋರಿ ಸಲ್ಲಿಸುವ ಮಾಹಿತಿ ಹಕ್ಕು ಅರ್ಜಿಗಳಿಗೆ ನಿಯಮಾನುಸಾರ ದಾಖಲೆ ಒದಗಿಸಿ ಕಾಲಮಿತಿಯಲ್ಲಿ ವಿಲೇ ಮಾಡಬೇಕು, ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಅವಧಿ ನಂತರ ಇಟ್ಟುಕೊಳ್ಳುವುದು ತಪ್ಪಾಗುತ್ತದೆ ಎಂದರು. ಸರ್ಕಾರಿ ನೌಕರÀರಿಗೆ ವಸತಿ ಗೃಹ ನೀಡಲು ಒಂದು ಮಹಡಿಯಲ್ಲಿ 10 ಮನೆಗಳಂತೆ ಒಟ್ಟು 90 ಮನೆಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಮತ್ತು ನೌಕರರ ಆರೋಗ್ಯ ಹಿತದೃಷ್ಠಿಯಿಂದ  ಇ.ಸಿ.ಜಿ, ರಕ್ತದೊತ್ತಡ ಪರೀಕ್ಷೆ, ಮಧುಮೇಹದ ಪರೀಕ್ಷೆಯನ್ನು 3 ತಿಂಗಳಿಗೊಮ್ಮೆ ಮಾಡಿ ನೌಕರರ ಆರೋಗ್ಯ ತಪಾÀಸಾಣೆ ಮಾಡಲು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.