ಜಂಗೀ ಕುಸ್ತಿಗೆ ಅಖಾಡ ಸಜ್ಜು

ವೈ.ಎಸ್.ಎಲ್. ಸ್ವಾಮಿ

ಬೆಳಗಾವಿ ಅಧಿವೇಶನ

ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಕಾರ್ಮಿಕರು ವಿಧಾನಸೌಧದ ಮುಂಭಾಗ ಮೆಟ್ಟಿಲುಗಳನ್ನು ನೀರಿನಿಂದ ಸ್ವಚ್ಛಗೊಳಿಸುತ್ತಿರುವುದು.

ಬೆಳಗಾವಿ,ಡಿ.೩:ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಾತಿನ ಸಮರ, ಜಂಗೀಕುಸ್ತಿ, ಜಟಾಪಟಿಗಳಿಗೆ ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಖಾಡ ಸಿದ್ದವಾಗಿದೆ.ರಾಜ್ಯದ ಕಾಂಗ್ರೆಸ್ ಸರ್ಕಾರ ೬ ತಿಂಗಳು ಪೂರೈಸಿರುವ ಬೆನ್ನಲ್ಲೆ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ಮೇಲೆ ಜಂಟಿಯಾಗಿ ಸಮರ ಸಾರಲು ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ತುದಿಗಾಲಲ್ಲಿ ನಿಂತಿವೆ.ಪ್ರತಿಪಕ್ಷಗಳ ಜಂಟಿ ಸಮರವನ್ನು ಎದುರಿಸಲು ಕಾಂಗ್ರೆಸ್ ಸಹ ತನ್ನದೇ ಆದ ರಣತಂತ್ರಗಳನ್ನು ರೂಪಿಸಿರುವುದಿಂದ ಸದನ ಕಲಾಪಗಳು ರಂಗೇರಲಿದ್ದು, ಸದನ ಕದನ ಕುತೂಹಲ ಕೆರಳಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ತರಾಟೆಗೆ ತೆಗೆದುಕೊಂಡು ಚಳಿಯಲ್ಲೂ ಸರ್ಕಾರದ ಬೆವರಿಳಿಸಲು ಪ್ರತಿಪಕ್ಷಗಳು ಹಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದ್ದು, ವರ್ಗಾವಣೆ ದಂಧೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ವೈಫಲ್ಯ, ಬರ ನಿರ್ವಹಣೆ ವೈಫಲ್ಯ, ಗುತ್ತಿಗೆದಾರರ ಮೇಲೆ ತೆರಿಗೆ ದಾಳಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರರವರ ಹಲೋ ಅಪ್ಪ ಆಡಿಯೋ, ಸಭಾಧ್ಯಕ್ಷ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹಮದ್ ಅವರ ಹೇಳಿಕೆ, ಡಿ.ಕೆ. ಶಿವಕುಮಾರ್ ವಿರುದ್ದ ಸಿಬಿಐ ತನಿಖೆಯ ಅನುಮತಿ ವಾಪಸ್ ನಿರ್ಧಾರ, ಅನುದಾನ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳ ಸ್ಥಗಿತ, ರಾಜ್ಯದಲ್ಲಿ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಜತೆಗೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಲು ವಿಪಕ್ಷಗಳು ಅಣಿಯಾಗಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ವಿಪಕ್ಷಗಳನ್ನು ಕಟ್ಟಿ ಹಾಕಲು ಕಾಂಗ್ರೆಸ್ ಕೂಡಾ ತನ್ನ ಬತ್ತಳಿಕೆಯಲ್ಲಿ ಪ್ರತ್ಯಾಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದೆ.ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸರ್ಕಾರದ ವಿರುದ್ಧ ಸದನದಲ್ಲಿ ಎರಡೂ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲು ಮುಂದಾಗಿವೆ.ದೋಸ್ತಿ ಪಕ್ಷಗಳು ಒಟ್ಟಾಗಿ ಯಾವೆಲ್ಲಾ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಬಗ್ಗೆ ಈಗಾಗಲೇ ಎರಡೂ ಪಕ್ಷಗಳ ನಾಯಕರು ಚರ್ಚೆ ನಡೆಸಿ ಕಾರ್ಯಸೂಚಿಯನ್ನು ಸಿದ್ಧ ಮಾಡಿಕೊಂಡಿದ್ದಾರೆ.ರಚನಾತ್ಮಕ ವಿರೋಧ ಪಕ್ಷವಾಗಿ ಜನಪರ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸರ್ಕಾರ ಇಟ್ಟಿರುವ ತಪ್ಪು ಹೆಜ್ಜೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಬಗ್ಗೆಯೂ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ತಮ್ಮದೇ ಆದ ಕಾರ್ಯಸೂಚಿಗನ್ನು ಸಿದ್ಧ ಮಾಡಿಕೊಂಡಿವೆ.ಸದನದ ಸಮಯ ಹಾಳು ಮಾಡದೆ ಸರ್ಕಾರದ ವೈಫಲ್ಯಗಳನ್ನು ಜಗಜ್ಜಾಹೀರು ಮಾಡುವ ತಂತ್ರವನ್ನು ವಿಪಕ್ಷಗಳು ರೂಪಿಸಿವೆ.ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯವನ್ನು ಸಮರ್ಪಕವಾಗಿ ಸದನದ ಮುಂದಿಡಲು ವಿಪಕ್ಷ ನಾಯಕರಾದ ಆರ್. ಅಶೋಕ್ ಬರ ಪ್ರದೇಶಗಳಲ್ಲಿ ಪ್ರವಾಸ ನಡೆಸಿ ವಸ್ತುಸ್ಥಿತಿಯನ್ನು ಅವಲೋಕಿಸಿದ್ದಾರೆ. ವಿಪಕ್ಷಗಳ ಬರ ನಿರ್ವಹಣಾ ವೈಫಲ್ಯದ ಅಸ್ತ್ರಕ್ಕೆ ಕಾಂಗ್ರೆಸ್ ಕೇಂದ್ರದಿಂದ ಇದುವರೆಗೂ ಒಂದು ನಯಾ ಪೈಸೆ ನೆರವು ಬಾರದ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಬಾಯಿ ಮುಚ್ಚಿಸಲು ತಂತ್ರ ರೂಪಿಸಿದ್ದು, ಸದನದಲ್ಲಿ ಬರ ವಿಚಾರ ಗದ್ದಲ-ಕೋಲಾಹಲಗಳಿಗೆ ಕಾರಣವಾಗುವುದು ನಿಶ್ಚಿತ.ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ನಡೆದಿರುವ ಅಧಿಕಾರ ಹಂಚಿಕೆಯ ಜಟಾಪಟಿ, ಒಳ ಬೇಗುದಿಗಳನ್ನು ವಿಪಕ್ಷಗಳು ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಸಚಿವರುಗಳ ವಿರುದ್ಧ ಸ್ವಪಕ್ಷ ಶಾಸಕರುಗಳೇ ಬರೆದಿರುವ ಪತ್ರಗಳು ವಿಪಕ್ಷಗಳಿಗೆ ಅಸ್ತ್ರವಾಗಿದ್ದರೆ, ಕಾಂಗ್ರೆಸ್‌ಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆಯಿಂದ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನದ ಅಲೆ ಪ್ರತ್ಯಾಸ್ತ್ರವಾಗಲಿದೆ. ಈ ವಿಚಾರ ಕೂಡ ಸದನದ ಕಾವನ್ನು ಹೆಚ್ಚಿಸಲಿದೆ.ವಿಧಾನಸಭಾಧ್ಯಕ್ಷರ ಸ್ಥಾನಮಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹಮದ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆಯೂ ವಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಜಾತಿ ಗಣತಿ ವರದಿ ಪ್ರಸ್ತಾಪ
ಈ ಅಧಿವೇಶನದಲ್ಲೇ ಜಾತಿ ಗಣತಿ ವರದಿಯು ಪ್ರಸ್ತಾಪವಾಗುವ ಸಾಧ್ಯತೆ ಇದ್ದು, ಈ ವಿಚಾರವೂ ಸದನದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಿವೆ.
ಈ ಅಧಿವೇಶನದಲ್ಲಿ ಹಲವು ಮಹತ್ವದ ವಿಧೇಯಕಗಳು ಮಂಡನೆಯಾಗಲಿದ್ದು ೧೦ ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನ ಸಾಕಷ್ಟು ಕಾವೇರುವುದು ನಿಶ್ಚಿತ.