ಜಂಗಮ ವೇಷಧಾರಿಯಲ್ಲ, ಸಮಾಜದ ಮಾರ್ಗದರ್ಶಕ

ಕಲಬುರಗಿ:ಡಿ.22:ಬಸವಣ್ಣನವರು ಹುಟ್ಟುಹಾಕಿದ ಪ್ರಮಥಗಣ ಎಂಬುದು ಒಂದು ಅರಿವುಳ್ಳ ಶರಣರ ಗುಂಪು . ಅವರ ಕರ್ತವ್ಯವೆಂದರೆ ಸದಾ ಚರಜಂಗಮರಾಗಿ ಭಕ್ತರ ಮನೆ-ಮಠಗಳಿಗೆ ಅಡ್ಡಾಡುತ್ತ, ಅವರಿಗೆ ಅರಿವನ್ನು ಹಂಚುವುದು ಜಂಗಮನ ಮುಖ್ಯ ಕರ್ತವ್ಯ ಎಂದು ಡಾ. ಜಯಶ್ರೀ ದಂಡೆ ಅವರು ಅಭಿಪ್ರಾಯ ಪಟ್ಟರು.
ಅವರು ದಿನಾಂಕ 20-12-20ರಂದು ಕಲಬುರಗಿಯ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆದ ಲಿಂ. ಗುರುಪಾದಪ್ಪ ಶಿವಲಿಂಗಪ್ಪ ಘಂಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಸದಸ್ಯಬಲವುಳ್ಳ ಪ್ರಮಥಗಣ ಸಂಘಟನೆಯ ಸದಸ್ಯರಾದ ಜಂಗಮರು ಸದಾ ಸಂಚಾರಿಗಳಾಗಿ, ಸಮಾಜಕ್ಕೆ ಸಂಸ್ಕಾರ ಕೊಡುವ ಜವಾಬ್ದಾರಿ ಹೊತ್ತವರು. ಚರಿಸಿ ಜಂಗಮವಾದ ಇವರು ಇದ್ದೆಡೆಯಲ್ಲಿ ಕುಲವಿಲ್ಲ ಎಂಬುದು ಶರಣರ ವಿಚಾರ. ಕೇವಲ ವೇಷಧಾರಿ, ಆಹಾರಕ್ಕಾಗಿ ಹಪಹಪಿಸುವವ, ಆಸೆಬುರಕ ಎಂದೂ ಜಂಗಮನಾಗಲಾರ. ಆತ ತನ್ನಲ್ಲಿ ಸಂಗ್ರಹವಾದ ಜ್ಞಾನವನ್ನು, ಸಂಪತ್ತನ್ನು ಭಕ್ತರಿಗೆ ವಿನಿಯೋಗಿಸುವ ಸದ್ಮನಸ್ಸಿನವ ನಾಗಿರಬೇಕು.
‘ಕಾಲಿಲ್ಲದೆ ಜಂಗಮ ಸುಳಿಯಬೇಕು. ಕೈಯಿಲ್ಲದೆ ಭಕ್ತ ನೀಡಬೇಕು, ಮಾಡಬೇಕು’ ಎಂಬುದು ಇಲ್ಲಿಯ ಬಹುದೊಡ್ಡ ಚಿಂತನೆಯಾಗಿದೆ. ಜಂಗಮನಾದವನು ಶಾಂತಿ ಸಮಾಧಾನ ಗುಣದವನಾಗಿರುತ್ತಾನೆ. ತನ್ನನ್ನು ನಂಬಿದ ಸಜ್ಜನಸದ್ಭಕ್ತರಿಗೆ ಉದ್ಧರಿಸುವ ಮಹತ್ ಕಾಯಕದಲ್ಲಿ ಆತ ನಿರತನಾಗಿರಬೇಕು. ಕಾಡುವ ಬೇಡುವ ಪೀಡೆಯ ಗುಣವುಳ್ಳವನು ಜಂಗಮನಾಗಲಾರ. ಜಡರ ಮನದ ಕತ್ತಲೆ ಕಳೆದು ಜ್ಞಾನ ಪ್ರಸಾರ ಮಾಡುವ ಮಣಿಹ ಹೊತ್ತವನು ಶರಣರ ದೃಷ್ಟಿಯಲ್ಲಿ ಜಂಗನಾಗಿರುತ್ತಾನೆ ಎಂದು ಡಾ. ಜಯಶ್ರೀ ದಂಡೆ ಅವರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಬಸವ ಸಮಿತಿ ತಯಾರಿಸಿದ 2021ರ ಡೈರಿಯನ್ನು ಡಾ. ವಿಲಾಸವತಿ ಖೂಬಾ ಅವರು ಬಿಡುಗಡೆಗೊಳಿಸಿದರು. ಡಾ. ವೀರಣ್ಣ ದಂಡೆ, ಶ್ರೀ ಬಂಡಪ್ಪ ಕೇಸೂರ, ದತ್ತಿದಾನಿಗಳಾದ ಶ್ರೀ ಚಂದ್ರಕಾಂತ ಘಂಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಉದ್ದಂಡಯ್ಯ ಅವರು ಕಾರ್ಯಕ್ರಮ ನಡೆಸಿಕೊಟ್ಟರು.