ಜಂಗಮ ಪ್ರೇಮಿ, ತ್ರಿವಿಧ ದಾಸೋಹಿ, ಶಿವಶರಣ ಶ್ರೀ ನಾವದಗಿಯ ರೇವಪ್ಪಯ್ಯ

ಭಾಲ್ಕಿ:ಡಿ.9:ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ನಾಡು ಶರಣರ ಸಂಗಮದಿಂದ ಅಭ್ಯಾಯಮಾನವಾಗಿ ಕಂಗೊಳಿಸುತ್ತಿತ್ತು. ಕಲ್ಯಾಣದ ಕ್ರಾಂತಿಯ ನಂತರ ಬಸವಾದಿ ಶರಣರು ಕಲ್ಯಾಣ ನಾಡನ್ನು ತೊರೆದು ಕೂಡಲಸಂಗಮ, ಶೋಲಾಪೂರ, ಉಳವಿ ಹೀಗೆ ಬೇರೆ ಬೇರೆ ಕಡೆ ಹೋದಾಗ ಕಲ್ಯಾಣ ನಾಡು ಓಡೆಯನಿಲ್ಲದ ಮನೆಯಾಯಿತು. ಶಿವಶರಣರು ಹೇಳಿಕೊಟ್ಟ ನೀತಿ ಮಾತುಗಳು ವಚನಗಳು ಜನಸಾಮಾನ್ಯರ ಮನೆ ಮನಗಳಿಗೆ ಮುಟ್ಟಿಸುವ ಕಾರ್ಯ ಕುಂಠಿತವಾಗಿ ಕಲ್ಯಾಣ ಬಡವಾಯಿತು.
ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲಿ ಮೇಲ್ವರ್ಗದ ಜನರು, ಬ್ರಾಹ್ಮಣರು ಕೆಳವರ್ಗದ ಜನರನ್ನು ಹೊಡೆದು ಬಡೆದು ಸಾಯಿಸಿದರು. ಮನೆಗಳನ್ನು ಒಡೆದರು ಶರಣ ಭಕ್ತರ ಶೋಷಣೆ ಮಾಡಿದರು. ವರ್ಣಾತೀತವಾದ ಲಿಂಗವಂತರಲ್ಲಿ ವರ್ಣಕಲ್ಪನೆ ಹುಟ್ಟಿಸಿದರು. ವೀರಶೈವ ಲಿಂಗಾಯತ ಧರ್ಮದ ಧ್ಯೇಯ ಮರೆತುಹೋಯಿತು. ತತ್ವಗಳನ್ನೆ ಅರಿಯದ ಮೂರ್ಖರು ಅಜ್ಞಾನಿಗಳು ತಮಗೆ ಬೇಕಾದ ಹಾಗೆ ತತ್ವಗಳನ್ನು ಭೋದಿಸಿದರು. ಲಿಂಗವಂತರು ಭಯದಲ್ಲಿ ಬದಲಾಗತೊಡಗಿದರು. ಇಂತಹ ಪರಿಸ್ಥಿತಿಯಲ್ಲಿ ಕಲ್ಯಾಣ ನಾಡಿನಲ್ಲಿ ವೀರಶೈವ ಲಿಂಗಾಯತ ಧರ್ಮದ ನಿಜ ತತ್ವಗಳ ಪ್ರಚಾರ ಮಾಡುವ ಕೆಲಸಕ್ಕೆ ಒಬ್ಬ ಮಹಾನುಭಾವರ ಅಗತ್ಯವಿತ್ತು. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಎನ್ನುವಂತೆ ನಮ್ಮನ್ನು ಉದ್ಧರಿಸಲು ಶಿವಶರಣ ಶ್ರೀ ನಾವದಗಿ ರೇವಪ್ಪಯ್ಯನವರು ಜನಿಸಿ ಬಂದರು.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಸುಮಾರು 17ಕಿ.ಮೀ. ಹಾಗೂ ಬಸವಕಲ್ಯಾಣದಿಂದ 28ಕಿಮೀ ದೂರದಲ್ಲಿರುವ ಒಂದು ಸಣ್ಣ ಗ್ರಾಮ ನಾವದಗಿ.
ಈ ಗ್ರಾಮದಲ್ಲಿ ಹಾವಯ್ಯ ಮತ್ತು ನಾಗಮ್ಮ(ನಾಗಲಾಂಬೇ) ಎಂಬ ದಂಪತಿಗಳು ಧಾರ್ಮಿಕ ಜೀವನವನ್ನು ಸಾಗಿಸುತ್ತಿದ್ದರು.
ಈ ಪುಣ್ಯ ಪುರುಷರ ಪುಣ್ಯ ಉದರದಲ್ಲಿ ಶಾಲಿವಾಹನ ಶಕೆ 1753ರಲ್ಲಿ ಶ್ರಾವಣ ಬಹುಳ ದ್ವಾದಶಿ ಗುರುವಾರದಂದು ಶ್ರೀ ರೇವಪ್ಪಯ್ಯನವರು ಜನಿಸಿದರು. “ಕಲಿಯುಗ ಆರಂಭವಾಗಿ 5000 ವರ್ಷಕ್ಕೆ ಕಲ್ಯಾಣದ ಪೂರ್ವದಿಶೆಯ ಏಳುಗಾವುದಪೂರ ಒಂದರಲ್ಲಿ ಶ್ಯಾಮವರ್ಣ ಶ್ವೇತವಸ್ತ್ರ ಹೊಂದಿರುವ ಕುಳ್ಳನೋರ್ವನು ಜನಿಸಿ, ವೀರಶೈವಧರ್ಮ ಕ್ರಾಂತಿಗೈವನೆಂದು” ಕಾಲಜ್ಞಾನದ ಸಾರವಿದೆ. ಅದರಂತೆ ರೇವಪ್ಪಯ್ಯನವರೇ ಜನಿಸಿ ಅದಕ್ಕೆ ಸಾಕ್ಷಿಯಾದರು. ಬಸವಾದಿ ಶರಣರ ಘನ ವ್ಯಕ್ತಿತ್ವ ಹೊಂದಿರುವ ರೇವಪ್ಪಯ್ಯನವರು ಶಾಂತಿಪ್ರಿಯರು, ವಿಶ್ವ ಪ್ರೇಮಿಗಳು, ದಯೆಯುಳ್ಳ, ಮಮತೆಯುಳ್ಳ ಮಹಾದಾನಿ. ಹಾವಯ್ಯ ನಾಗಮ್ಮ ದಂಪತಿಗಳು ಧಾರ್ಮಿಕ ಜೀವನ ನಡೆಸುತ್ತಾ ವ್ಯವಸಾಯವನ್ನು ತಮ್ಮ ಮುಖ್ಯ ಕಾಯಕವನ್ನಾಗಿ ಮಾಡಿಕೊಂಡು ಇದ್ದುದರಲ್ಲಿಯೇ ಅಂಬಲಿ ಗಂಜಿಯಾದರೂ ಸಹ ನಿತ್ಯ ನೇಮ ಲಿಂಗಕ್ಕೆ ನೈವೇದ್ಯ ಅರ್ಪಿಸುತ್ತಿದ್ದರು.
ಹಾವಯ್ಯನವರು ಜಂಗಮರಾದರೂ ಭಿಕ್ಷೆ ಬೇಡಿ ಬಂದದ್ದಲ್ಲ ಜಂಗಮಾರ್ಚನೆಯನ್ನು ಮಾಡುತ್ತಾ ಹಸಿವು ಎಂದು ಬಂದವರಿಗೆ ಊಟವನ್ನು ಬಡಿಸುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದರು.
ಹಾವಯ್ಯ ನಾಗಮ್ಮ ದಂಪತಿಗಳಿಗೆ ಬಹುಕಾಲ ಮಕ್ಕಳಾಗಲಿಲ್ಲ. ಮಕ್ಕಳು ಬೇಕೆಂದು ಚಿಂತೆಯಲ್ಲಿ ದಂಪತಿಗಳು ಕೊರಗಲಿಲ್ಲ, ತಮ್ಮ ನಿತ್ಯನೇಮ ದಾಸೋಹವನ್ನು ಚೆನ್ನಾಗಿ ಮಾಡುತ್ತಾ ಮನೆಗೆ ಬರುವ ಜಂಗಮರನ್ನು ಶಿವ ಎಂದು ಭಾವಿಸಿ ದಾಸೋಹ ಕಾರ್ಯವನ್ನು ಶ್ರದ್ಧೆಯಿಂದ ನಿಷ್ಠೆಯಿಂದ ಮಾಡುತ್ತಿದ್ದರು. ಬಹುಕಾಲದ ನಂತರ ಕ್ರಿಸ್ತಶಕ 1753 ಶ್ರಾವಣಮಾಸದ ದ್ವಾದಶಿ ದಿನದಂದು ಓರ್ವ ಸುಪುತ್ರನಿಗೆ ಜನ್ಮ ನೀಡಿದರು. ಇವರು ಜನಿಸಿದ್ದು ಇಡಿ ಊರಿಗೆ ಆನಂದವಾಯಿತು. ಇವರ ಗ್ರಾಮದ ರೇವಣಸಿದ್ದರು ಮನೆಯ ದೇವರು ಇದ್ದ ಕಾರಣ ದಂಪತಿಗಳು ತಮ್ಮ ಮಗನಿಗೆ ರೇವಪ್ಪಯ್ಯ ಎಂದು ನಾಮಕರಣ ಮಾಡಿದರು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ರೇವಪ್ಪಯ್ಯ ಬಸವಾದಿ ಶರಣರಂತೆ ಬೆಳೆದರು. ಇವರ ಮನೆ ಗುರುಗಳು ಇವರ ಮುಖದ ದಿವ್ಯ ಲಕ್ಷಣವನ್ನು ಕಂಡು ಈತ ಮಹಾ ಶಿವಶರಣನಾಗುವನು ಎಂದು ಭವಿಷ್ಯ ನುಡಿದರು.
ಬೆಳೆಯುತ್ತ ಬೆಳೆಯುತ್ತ ಬಾಲಕ ರೇವಪ್ಪಯ್ಯ ಗುರುಗಳು ಹೇಳಿದಂತೆ ಉಜ್ವಲ ತೇಜಸ್ಸಿನಿಂದ ಪ್ರಕಾಶಮಾನವಾಗಿ ಬೆಳೆಯತೊಡಗಿದರು.
ಮುದ್ದು ಮುದ್ದಾದ ಬಾಲಕ ರೇವಪ್ಪಯ್ಯನವರು ಗ್ರಾಮದ ಎಲ್ಲರೊಡನೆ ಚೆನ್ನಾಗಿ ಬೆರೆತರು.
ರೇವಪ್ಪಯ್ಯನವರಿಗೆ ಎಂಟನೆಯ ವಯಸ್ಸಿನಲ್ಲಿಯೇ ಲಿಂಗದೀಕ್ಷೆಯನ್ನು ನೀಡಲಾಯಿತು ಸದ್ಗುರುಗಳಾದ ಶ್ರೀ ಸಿದ್ಧಲಿಂಗೇಶ್ವರರು ಇವರ ಗುರುಗಳು. ಚಿಕ್ಕಂದಿನಿಂದಲೇ ರೇವಪ್ಪಯ್ಯನವರಿಗೆ ವಿದ್ಯೆ ಕಲಿಯಲು ಬಹಳ ಆಸಕ್ತಿ ಇತ್ತು. ಮಗನ ಆಸಕ್ತಿಯನ್ನು ಕಂಡು ತಂದೆ-ತಾಯಿಯರು ಖಾಸಗಿ ಶಾಲೆಯಲ್ಲಿ ಧಾರ್ಮಿಕ ನೈತಿಕ ಶಿಕ್ಷಣವನ್ನು ಕೊಡಿಸಿದರು. ಆ ಕಾಲದಲ್ಲಿ ಕನ್ನಡ ಈ ವಿಭಾಗದಲ್ಲಿ ಅಷ್ಟು ಪ್ರಚಾರದಲ್ಲಿ ಇರಲಿಲ್ಲ. ಕನ್ನಡ ಭಾಷೆಯ ಸ್ಥಾನದಲ್ಲಿ ಮರಾಠಿ ಉರ್ದು ತೆಲುಗು ಪಾರ್ಸಿ ಮುಂತಾದ ಭಾಷೆಗಳು ತಮ್ಮ ಪ್ರಭುತ್ವವನ್ನು ಸಾಧಿಸಿದ್ದವು.
ಆದರೂ ಸಹ ಅಪ್ಪನವರು ಕನ್ನಡ ಭಾಷೆಯಲ್ಲಿ ಪ್ರಭುತ್ವ ಪಡೆದಿದ್ದರು. ಕನ್ನಡ, ಹಿಂದಿ, ಮರಾಠಿ, ಉರ್ದು, ಪಾರ್ಸಿ ಅನೇಕ ಭಾಷೆಗಳನ್ನು ಬಲ್ಲವರಾಗಿದ್ದರು. ಎಲ್ಲಾ ಭಾಷೆಯ ಪುಸ್ತಕಗಳನ್ನು, ತಾಡೋಲೆಗಳ ಗ್ರಂಥಗಳನ್ನು ಸಂಗ್ರಹಿಸಿದ್ದರು. ವಿಮರ್ಶಾತ್ಮಕವಾಗಿ, ವಿವರಣಾತ್ಮಕವಾಗಿ ಅಧ್ಯಯನ ಮಾಡುತ್ತಿದ್ದರು. ಅವರು ತಾವು ಓದಿದ ಪುಸ್ತಕದ ಹೆಸರು ಅಧ್ಯಾಯ ಪುಟದ ಸಂಖ್ಯೆ ಮುಂತಾದವುಗಳನ್ನು ಸಂದರ್ಭಕ್ಕನುಸಾರವಾಗಿ ಸರಿಯಾಗಿ ಹೇಳುತ್ತಿದ್ದರು. ಎಷ್ಟೇ ಬಾಷೆ ಬಲ್ಲವರಾಗಿದ್ದರು ಕನ್ನಡವನ್ನೇ ಮಾತನಾಡುತ್ತಿದ್ದರು. ಶರಣರ ವಚನಗಳನ್ನು ಓದಿಕೊಂಡು ಬೆಳೆದರು. ಅಪ್ಪಯ್ಯನವರು ವಿದ್ಯೆ, ವಿನಯ, ಬುದ್ಧಿಗಳನ್ನು ಬೆಳೆಸಿಕೊಂಡು ಬೆಳೆದು ದೊಡ್ಡವರಾದರು. ತಾರುಣ್ಯದಲ್ಲಿ ಮಗನಿಗೆ ಮದುವೆ ಮಾಡಬೇಕೆಂಬ ಹಂಬಲದಿಂದ ತಂದೆ-ತಾಯಿಗಳು ಕನ್ಯೆಯನ್ನು ಶೋಧಿಸತೊಡಗಿದರು. ಹೀಗಿರಲು ಹುಮನಾಬಾದ ತಾಲೂಕಿನ ಧೂಮ್ಮನಸೂರ ಗ್ರಾಮದ ಮಠಪತಿ ಪರಿವಾರದ ದೇವಮ್ಮ ಎನ್ನುವ ಕನ್ಯೆಯನ್ನು ನೋಡಿದರು. ಹೇಳಿ ಮಾಡಿಸಿದ ಜೋಡಿ ಎಂದು ರೇವಮ್ಮ ರೇವಪ್ಪಯ್ಯನವರ ಮದುವೆ ಬಹಳ ವಿಜ್ರಂಭಣೆಯಿಂದ ನೆರವೇರಿಸಿದರು.
ದೇವಮ್ಮನವರು ಪತಿಯ ದಾರಿಯಲ್ಲಿ ಹೆಜ್ಜೆ ಇಟ್ಟು ನಡೆದು ಅವರ ಆಜ್ಞೆಯನ್ನು ನಿರಂತರ ಪಾಲಿಸಿ ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿರುವುದು ಶಿವಂಗೆ’ ಎನ್ನುವಂತೆ ತಮ್ಮ ಜೀವನವನ್ನು ಸಾಗಿಸಿದರು. ಗಂಧದಕಡ್ಡಿ ತೀಡಿದಾಗ ಹೇಗೆ ಸುಗಂಧ ಬರುವುದು ಹಾಗೆ, ಹಣತೆ ಬತ್ತಿಯ ಹಾಗೆ ಜೀವನ ಸಾಗಿಸಿದರು. ಮಹಾನ್ ಜ್ಞಾನಿಯಾದ ಅವರು ಶಿಕ್ಷಕ ವೃತ್ತಿಯನ್ನು ಕಾಯಕವನ್ನು ಮಾಡುತ್ತಿದ್ದರು. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವಂತೆ ತಮಗೆ ಒಲಿದ ಜ್ಞಾನವನ್ನು ಎಲ್ಲರಿಗೂ ಉಣಬಡಿಸುತ್ತಾ ಜ್ಞಾನಪ್ರಭೆಯನ್ನು ಬೀರುತ್ತಾ ಜ್ಞಾನದಾಸೋಹವನ್ನು ಮಾಡಿದರು. ನಾವದಗಿ ರೇವಪ್ಪಯ್ಯನವರು ಆನೆ-ಕುದುರೆಗಳನ್ನು ಏರಿದವರಲ್ಲ ಸರಳ ಸಜ್ಜನ ಸಾಕಾರಮೂರ್ತಿ. ಕೊಡುಗೈ ದಾನಿ, ಕಾಮಧೇನುವಾಗಿದ್ದರು. ಬಟ್ಟೆ ಇಲ್ಲದವರಿಗೆ ಮೈಮೇಲೆ ತೊಟ್ಟ ಬಟ್ಟೆಗಳನ್ನು ನೀಡುತ್ತಿದ್ದರು, ಬರಿ ಒಂದು ತುಂಡು ಪಂಚೆ ಮಾತ್ರ ಧರಿಸಿ ಬರಿಮೈಯಲ್ಲಿ ತಮ್ಮ ಆಯುಷ್ಯವನ್ನು ಕಳೆದವರು. ಬಿಳಿಯ ಜಡೆ, ಉದ್ದ ಗಡ್ಡ ಉಳ್ಳ ವಜ್ರದೇಹಿಗಳು, ಹಣೆ ಮೇಲೆ ವಿಭೂತಿ, ಕಣ್ಣುಗಳಲ್ಲಿ ತೀಕ್ಷ್ಣ ಭಾವ, ಸಾಧಾರಣ ಎತ್ತರದ ಕೈಯಲ್ಲಿ ಜೋಳಿಗೆ ಹಿಡಿದು ನಡೇದವರು ಸ್ವಾಮಿ ರೇವಪ್ಪಯ್ಯ.
ತಂದೆ ತಾಯಿಗಳಂತೆ ನಾವದಗಿಯ ಶರಣ ರೇವಪ್ಪಯ್ಯನವರು ತಮ್ಮ ಆಯುಷ್ಯ ಇರುವರೆಗೂ ದಾಸೋಹ ನಡೆಸಿದರು. ತಮ್ಮ ಹೊಲದ ಆಸ್ತಿಯಿಂದ ಬಂದಷ್ಟೇ ಅಲ್ಲದೆ ಉಳ್ಳವರಿಂದ ರೂಪದಲ್ಲಿ ತೊಡಗಿದ್ದಲ್ಲವನ್ನು ಹಂಚಿ ದಾಸೋಹ ಕಾಯಕವನ್ನು ಮಾಡುತ್ತಿದ್ದರು. ಅಂದೇ ಪಡೆದಿದ್ದನ್ನು ಅಂದೇ ದಾನ ಮಾಡುತ್ತಿದ್ದರು. ರೇವಪ್ಪಯ್ಯನವರ ಸಂಗಡ ಐದು ಜನ ಮುತ್ತೈದೆಯರು 21 ಜನ ಗಣಂಗಳ ಊಟವಾಗಲೇ ಬೇಕಾಗುತ್ತಿತ್ತು. ಸಂಸಾರದಲ್ಲಿಯೂ ಸಹ ಇದೇ ನಿಯಮವನ್ನು ಪಾಲಿಸುತ್ತಿದ್ದರು. ದೀನದಲಿತರಿಗೆ ಸಂಕಟ ಕೇಳಿನೋಡಿ ಸುಮ್ಮನಿರುತ್ತಿರಲಿಲ್ಲ, ಅವರ ದುಃಖ ದೂರ ಮಾಡಿದಾಗಲೇ ಊಟಮಾಡುತ್ತಿದ್ದರು ಇಲ್ಲದಿದ್ದರೆ ಅವರೊಡನೆ ಉಪವಾಸ ಮಾಡುತ್ತಿದ್ದರು. ಒಮ್ಮೆ ಈ ಭಾಗದಲ್ಲಿ ಭಯಂಕರವಾದ ಅತಿವೃಷ್ಟಿ ಉಂಟಾಯಿತು. ಆಗ ಅಪ್ಪನವರು ಕಡಲಿ ಗುಗ್ಗರಿ ಕೊಟ್ಟು ಜನರಿಗೆ ಬದುಕಿಸಿದರು. ರೇವಪ್ಪಯ್ಯನವರು ಪ್ರತಿವರ್ಷ ದಂಪತಿ ಪೂಜೆಯನ್ನು ಏರ್ಪಡಿಸುತ್ತಿದ್ದರು. ಅಂದು ದಂಪತಿಗಳನ್ನು ಕರೆಸಿ ಅವರಿಗೆ ಮೈತುಂಬ ಆಯೇರ ಮಾಡಿ ಉಣಬಡಿಸುತ್ತಿದ್ದರು. ಹೀಗೆ ಉಣಬಡಿಸುವಾಗ ಎಷ್ಟೋ ದಂಪತಿಗಳು ಪಂಕ್ತಿಯಲ್ಲಿ ಇರುತ್ತಿದ್ದರು. ಇವರ ಊಟದಲ್ಲಿ ಯಾವ ಹೆಚ್ಚು ಕಡಿಮೆ ಆಗದಂತೆ ತಾವೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದರು. ತಮ್ಮ ದಾಸೋಹದಲ್ಲಿ ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ಒಂದೇ ಸಮನಾಗಿ ನೋಡಿಕೊಳ್ಳುತ್ತಿದ್ದರು.
ಯಾವ ತಾರತಮ್ಯವು ಅಗಲಾರದಂತೆ ನಡೆದುಕೊಂಡು ಬಂದರು.
ಅವರು ತಮ್ಮ ಪ್ರತಿದಿನದ ಲಿಂಗಪೂಜೆಯ ಮುಗಿದನಂತರ ಲಿಂಗಾರ್ಪಿತಕ್ಕಾಗಿ ಅಂಬಲಿ ನೈವೇದ್ಯ ಮಾಡುತ್ತಿದ್ದರು. ಇದು ಅವರ ನೇಮವಾಗಿತ್ತು.
ಹಣದ ಮದ ಉಳ್ಳವರಿಗೆ ದಾನದ ಮಹತ್ವವನ್ನು ಸಾರಿ ಹೇಳಿ ದಾನಾತ್ಮದ ಬೀಜವನ್ನು ಬಿತ್ತಿದರು.
ಹೀಗೆ ತಮ್ಮ ಜೀವಮಾನ ಇರುವವರೆಗೂ ಅನ್ನದಾಸೋಹ, ಜ್ಞಾನ ದಾಸೋಹ ಮಾಡಿಕೊಂಡು ಬಂದರು.
ಹೈದರಾಬಾದ್ ನಿಜಾಮ ಸರಕಾರದ ಮಹಾಪ್ರಧಾನಿಗಳಾದ ಕಿಶನ್ ಪ್ರಸಾದರು ಕೇಳಿ ರೇವಪ್ಪಯ್ಯನವರನ್ನು ಕರೆಸಿ ಸತ್ಕರಿಸಿ ಅವರ ನೇತೃತ್ವದಲ್ಲಿ ಮೂರು ದಿವಸ ಅನ್ನ ಸಮರ್ಪಣೆಯ ಕಾರ್ಯ ನಡೆಸಿದರು. ಮೃತ್ಯು ಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ ಎಂಬ ವಚನದಂತೆ ತಮ್ಮ ನಡೆನುಡಿಗಳಿಂದ ಮಾನವರಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟು ಮಾಡಿದವರು ಶ್ರೀ ರೇವಪ್ಪಯ್ಯನವರು.
ಅವರ ಜೀವನದ ಪ್ರತಿನಿಮಿಷವೂ ಬಸವಣ್ಣನವರ ಉಪದೇಶವನ್ನು ಆಚರಣೆಗೆ ತರುವ ಪ್ರಯತ್ನದಿಂದಲೇ ಕಳೆದರು. ಇವರು ಲಿಂಗೈಕ್ಯ ಸಮಯದಲ್ಲಿ 105 ವರ್ಷ ವಯಸ್ಸಾಗಿತ್ತು. ಆಗವರಿಗೆ ತಾವೇ ಸಂಚರಿಸುವ ಅಷ್ಟು ಶಕ್ತಿ ಇರಲಿಲ್ಲ. ಆದುದರಿಂದ ಕಂಬಳಿಯ ಕೈ ತೊಟ್ಟಿಲಲ್ಲಿ ಕುಳಿತುಕೊಂಡು ಭಕ್ತರಿಂದ ಎತ್ತಿಕೊಂಡು ಸಂಚರಿಸುವ ತಮ್ಮ ಶೀಲವನ್ನು ಮುಂದುವರಿಸಿದ್ದರು.
ಮಾರ್ಗಶಿರಮಾಸ ಶುದ್ಧಅಷ್ಟಮಿ ಸೋಮವಾರ ದಿನಾಂಕ 21-12-1936ರಲ್ಲಿ ನಾವದಗಿಯಲ್ಲಿ ಲಿಂಗದಲ್ಲಿ ಲಿಂಗೈಕ್ಯರಾದರು. ಅವರ ಅಂತಿಮದರ್ಶನಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ 20 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಅವರ ಯಾತ್ರೆ ಜಾತ್ರೆಯಾಗಿ ಪರಿಣಮಿಸಿತು.
ಅಂದಿನಿಂದ ಇಂದಿನವರೆಗೂ ಅವರ ಪುಣ್ಯತಿಥಿಯು ಜಾತ್ರೆಯ ರೂಪದಿಂದ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.
ಜಾತ್ರೆಯ ಹಿನ್ನೆಲೆ:
ನಾವದಗಿ ಗ್ರಾಮದ ರೇವಪ್ಪಯ್ಯ ಸ್ವಾಮಿಯವರು ಒಂದು ಸಲ ಜಾತ್ರೆಯಲ್ಲಿ ಊಟ ಮಾಡುವಾಗ ತುಪ್ಪ ಕಡಿಮೆ ಬಿದ್ದಿತ್ತಂತೆ. ಅಲ್ಲಿಯೇ ಇದ್ದ ತೆರೆದ ಬಾವಿಯ ನೀರನ್ನು ಶರಣರು ತುಪ್ಪವಾಗಿ ಪರಿವರ್ತಿಸಿ, ಭಕ್ತರಿಗೆ ಉಣ ಬಡಿಸಿದ್ದರು ಎಂಬ ಪ್ರತೀತಿಯಿದೆ. ಈ ಪವಾಡದಿಂದ ಜಾತ್ರೆಯಲ್ಲಿ ಹೋಳಿಗೆ ತುಪ್ಪ- ಊಟದ ಪರಂಪರೆ ಮುಂದುವರೆದಿದೆ ಎಂದು ಹೇಳುತ್ತಾರೆ ರೇವಪ್ಪಯ್ಯ ಶರಣರ ಭಕ್ತರು.
ರೇವಪ್ಪಯ್ಯ ಶಿವಶರಣರ 85ನೆಯ ಜಾತ್ರಾ ಮಹೋತ್ಸವ 11-12-2021 ರಿಂದ 15-12-2021ರವರೆಗೆ ನಾವದಗಿಯಲ್ಲಿ ಜರುಗಲಿದೆ.
ಲೇಖನ: ಸಿದ್ದಲಿಂಗ ಶಿವಯೋಗಿ ಸ್ವಾಮಿ ಉಚ್ಛ ತಾ. ಭಾಲ್ಕಿ ಜಿ. ಬೀದರ