ಜಂಗಮರ ಕಲ್ಗುಡಿಯಲ್ಲಿ ಮೊಳಗಿದ ಅಕ್ಷರ ಜಾತ್ರೆ

ದಸ್ತಗೀರ್ ಗುಡಿಹಾಳ
ಗಂಗಾವತಿ ಮಾ.15: ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಕ ಕ್ಷೇತ್ರಕ್ಕೆ ಗಂಗಾವತಿ ಸಾಹಿತಿಗಳ ಕೊಡುಗೆ ಅಪಾರವಾದದ್ದು ಎಂದು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಜ್ಞಾನಿ ಉದಯಶಂಕರ ಪುರಾಣಿಕ ಹೇಳಿದರು.
ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಸಿ.ಎಚ್.ಸತ್ಯನಾರಾಯಣ ಬಯಲು ಜಾಗದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾವತಿ ತಾಲ್ಲೂಕು ಕನ್ನಡ ಸಾಹಿತ್ಯ, ಸಂಸ್ಕೃತಿಯ ತವರು ಆಗಿದೆ. ಆದರೆ, ಕೊಪ್ಪಳ ಜಿಲ್ಲಾಡಳಿತದ ಜಾಲತಾಣದಲ್ಲಿ ತಾಲೂಕಿನ ಸಮಗ್ರ ಮಾಹಿತಿ ಇಲ್ಲ. ಹೀಗಾಗಿ ಜಿಲ್ಲಾಡಳಿತ, ತಾಲೂಕಾಡಳಿ ಮತ್ತು ಅಧಿಕಾರಿಗಳು ತಾಲೂಕಿನ ಸಮಗ್ರ ಮಾಹಿತಿಗಳನ್ನು ಜಾಲತಾಣದಲ್ಲಿ ನಮೂದಿಸಬೇಕು ಎಂದರು.
ಸರ್ಕಾರಿ ಶಾಲೆಯ ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶಿದಂದ ದೇಶಾದ್ಯಂತ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಜಾರಿಗೆ ತರಲಾಗಿದೆ. ಎಟಿಎಲ್ ಸ್ಥಾಪನೆಗಾಗಿ ದೇಶಾದ್ಯಂತ 33 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 14,916 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ 550 ಎಟಿಎಲ್ ಲ್ಯಾಬ್ ಗಳಿದ್ದು, ಗಂಗಾವತಿ ತಾಲ್ಲೂಕಿನಲ್ಲಿ 17 ಲ್ಯಾಬ್‍ಗಳು ಇದೆ. ಈ ಯೋಜನೆ ಸಂಪೂರ್ಣ ಅನುಷಠನಕ್ಕೆ ಎಲ್ಲಾ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದರು.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಜನರು ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಪೂರಕವಾದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಇಲ್ಲವಾದರೆ ನಾವೆಲ್ಲರೂ ತೀವ್ರ ಕಷ್ಟ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಭವಿಷ್ಯದಲ್ಲಿ ಎದುರಾಗುವ ಹಲವು ಅಪಾಯಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷರ ನುಡಿ ಬಿಡುಗಡೆ ಮಾಡಿದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಮ್ಮೇಳನದಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವ ದೃಷ್ಠಿಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡದ ವಿಷಯ ಬಂದಾಗ ನೆಲ, ಜಲ, ಭಾಷೆ ಎನ್ನದೇ ಕನ್ನಡಕ್ಕಾಗಿ ಎಲ್ಲರೂ ಹೋರಾಟ ಮಾಡಲು ಸಜ್ಜಾಗಿರಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯಾದ ಮಮ್ಮಿ-ಡ್ಯಾಡಿ ಸಂಸ್ಕೃತಿಯನ್ನು ತೊಡೆದು ಹಾಕುವಂತೆ ಮನವಿ ಮಾಡಿದರು.

ಬಳಿಕ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕನಕಗಿರಿ ಶಾಸಕರಾದ ಬಸವರಾಜ ದಢೇಸೂಗೂರು ಮಾತನಾಡಿ, ಕನ್ನಡಿಗರ ರಕ್ತದ ಕಣಕಣದಲ್ಲಿ ಕನ್ನಡ ಇದೆ. ಕನ್ನಡಕ್ಕಾಗಿ ನಮ್ಮ ಜನ ಪ್ರಾಣ ಕೊಡಲು ತಯಾರಿರುತ್ತಾರೆ. ಅಂತಹದ್ರಲ್ಲಿ ಗಡಿ ವಿಚಾರಕ್ಕೆ ಬಂದರೆ, ಒಂದಿಂಚೂ ನಮ್ಮ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂದರು. ಮಹಿಳಾ ಪದವಿ ಕಾಲೇಜು ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಸಮ್ಮೇಳನಾಧ್ಯಕ್ಷೆ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಬಹುತ್ವ ಭಾರತ ಸಾಂಸ್ಕೃತಿಕ ಗುಣವನ್ನು ಹೊಂದಿರುವ ಈ ನೆಲ ಇಂದು ಕೊರೊನಾದಂತ ಮಹಾಮಾರಿ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸಮ್ಮೇಳನಗಳನ್ನು ಆಯೋಜಿಸುವುದು ಸುಲಭದ ಸಂಗತಿಯಲ್ಲ. ಭತ್ತದ ನಾಡೆಂದು ಪ್ರಖ್ಯಾತಿ ಪಡೆದಿರುವ ಗಂಗಾವತಿ ಭತ್ತದ ನಾಟೀ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ನೆಲೆಬೀಡಾಗಿದೆ. ಇಡೀ ದೇಶ ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ದೆಹಲಿಯಲ್ಲಿ ಸುಮಾರು ದಿನಗಳಿಂದ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ರೈತರು ದೇಶದ ಬೆನ್ನೆಲುಬು ಆಗಿದ್ದು, ಅವರನ್ನು ಗೌರವಿಸುವುದೆಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ. ಹಾಗಾಗಿ ಸರ್ಕಾರಗಳು ರೈತರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು.

ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಪರಿಣಾಮಕಾರಿಯಾದ ಯೋಜನೆಗಳನ್ನು ಅನುಷಠನಗೊಳಿಸಬೇಕಿದೆ. ಜೊತೆಗೆ ನೆಲ, ಜಲದ ರಕ್ಷಣೆ ವಿಚಾರ ಬಂದಾಗ ನಮ್ಮನ್ನು ಆಳಿದ ಸರ್ಕಾರಗಳು ಕಾವೇರಿ ನದಿಗೆ ತೋರಿದಷ್ಟು ಕಾಳಜಿ ಕೃಷಿಣ, ತುಂಗಭದ್ರಾ ನೀರಿನ ರಕ್ಷಣೆ ವಿಚಾರದಲ್ಲಿ ತೋರಿಸುತ್ತಿಲ್ಲ. ಸಾವಿರಾರು ಟಿಎಂಸಿ ನೀರು ಪಕ್ಕದ ರಾಜ್ಯಗಳಿಗೆ ಹರಿದು ಹೋಗುತ್ತಾ ಇದೆ. ಆ ನೀರನ್ನು ನಾವು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಈಗಾಗಲೇ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಒಳ್ಳೆಯ ಕೆಲಸ ಎಂದರು.
ಹೆಬ್ಬಾಳದ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಈ ವೇಳೆ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿ.ಪಂ.ಸದಸ್ಯರಾದ ಅಮರೇಶ ಗೋನಾಳ, ವಿಜಯ ಲಕ್ಷ್ಮೀ ಪ್ರಭಾಕರ, ಜಂಗಮರ ಕಲ್ಗುಡಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ನಾಯಕ, ಉಪಾಧ್ಯಕ್ಷ ಚಂದ್ರಶೇಖರ ಸಿಂದ್ಲಿ, ತಾ.ಪಂ.ಅಧ್ಯಕ್ಷ ಮಹ್ಮದ್ ರಫಿ, ತಾ.ಪಂ ಸದಸ್ಯೆ ಆಶಾಬೀ ಹೊನ್ನೂರು ಸಾಬ್, ಕನ್ನಡ ಪುಸಕ್ತ ಪ್ರಾಧಿಕಾರದ ಸದಸ್ಯ ಅಶೋಕ ರಾಯ್ಕರ್, ಕಳಕನಗೌಡ ಕಲ್ಲೂರು, ಡಿವೈಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ಬಿಇಒ ಸೋಮಶೇಖರಗೌಡ, ಸಿಪಿಐ ಉದಯ ರವಿ, ಪಿಎಸ್ ಐ ದೊಡಪ್ಪ ಜೆ., ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ, ಗೌರವ ಕಾರ್ಯದರ್ಶಿ ಬಸವರೆಡ್ಡಿ ಆಡೂರು, ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಬಿ.ಗೊಂಡಬಾಳ, ಸಮ್ಮೇಳನ ಸಂಚಾಲಕ ವೈ.ಆನಂದರಾವ್, ವೈ.ಸತ್ಯನಾರಾಯಣ, ರಮೇಶ ಕುಲಕರ್ಣಿ, ವೆಂಕಟರಾವ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.


ಕನ್ನಡ ಧ್ವಜ ಹಸ್ತಾಂತರ
ಇದಕ್ಕೂ ಮುನ್ನ ಗಂಗಾವತಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹಾಸ್ಯಭಾಷಣಕಾರ ಗಂಗಾವತಿ ಪ್ರಾಣೇಶ್ ಕನ್ನಡ ಧ್ವಜವನ್ನು ಹಾಲಿ ಸಮ್ಮೇಳನಾಧ್ಯಕ್ಷೆ ಡಾ.ಮುಮ್ತಾಜ್ ಬೇಗಂ ಅವರಿಗೆ ಹಸ್ತಾಂತರಿಸಿದರು.


ಆರು ಕೃತಿಗಳ ಲೋರ್ಕಾಪಣೆ
ಡಾ.ಮಮ್ತಾಜ್ ಬೇಂಗ ಅವರ ಬಹುತ್ವ ಸಂಕಥನ, ಹಗಲು ವೇಷಗಾರ ವಿಭೂತಿ ಗುಂಡಪ್ಪ, ಜನಪದ ಸಾಹಿತ್ಯ ತಾತ್ವಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಹಾಗೂ ಸಿದ್ದು ಬಿರಾದಾರ ಅವರ 371ಜೆ ವಿಶೇಷ ಸ್ಥಾನಮಾನ ಮತ್ತು ನಿಮಗೊಂದು ಸಲಾಮ್ ಕೃತಿಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು.


ಮೆರವಣಿಗೆ ಅದ್ದೂರಿ
ತಾಲ್ಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮೀಪದ ಜಂಗಮರ ಕಲ್ಗುಡಿಯಲ್ಲಿ ಭಾನುವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಸಮ್ಮೇಳನದ ಅಧ್ಯಕ್ಷರಾದ ಡಾ.ಮುಮ್ತಾಜ್ ಬೇಗಂ ದಂಪತಿಯನ್ನು ಪುಷ್ಪ ಹಾಗೂ ನಾಡ ಧ್ವಜಗಳಿಂದ ಅಲಂಕೃತಗೊಳಿಸಿದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಕುಂಭ ಮೆರವಣಿಗೆ ವಿವಿಧ ಕಲಾ ತಂಡಗಳಾದ ಡೊಳ್ಳು ಕುಣಿತ, ಕಂಸಾಳೆ, ಲಂಬಾಣಿ ನೃತ್ಯ, ಜನಪದ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.


ಊಟದ ವ್ಯವಸ್ಥೆಗೆ ಮೆಚ್ಚುಗೆ
ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತಿಗಳು, ಕಲಾವಿದರು ಸೇರಿದಂತೆ ಸಾಹಿತ್ಯಾಭಿಮಾನಿಗಳಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಉದ್ಯಮಿ ಕಳಕನಗೌಡ ಪಾಟೀಲ ಅವರು ಸಮ್ಮೇಳನಕ್ಕೆ ಆಗಮಿಸಿದವರಿಗೆ ಸ್ವಂತ ಊಟ ಉಣಬಡಿಸಿದರು. ರೋಟ್ಟಿ ಪ್ರೈ, ರವಾ ಸಜ್ಜಕಾ, ಬಂದನೆಕಾಯಿ, ನುಗ್ಗೆಕಾಯಿ ಪಲ್ಲೆ, ಚಟ್ನಿ, ಅನ್ನ ಸಾಂಬಾರ ಜೊತೆಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.


ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಒತ್ತಾಯ
ಗಂಗಾವತಿ ನಗರದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಭಾನುವಾರ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್.ಎಫ್,ಐ ತಾಲ್ಲೂಕು ಸಮಿತಿಯೂ ಮನವಿ ಸಲ್ಲಿಸಿತು.