ಜಂಗಮರಿಗೆ ಪರಿಶಿಷ್ಟ ಪ್ರಮಾಣ ಪತ್ರ, ಡಿಎಸ್‌ಎಸ್ ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೭; ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಬೇಡ ಜಂಗಮರು ಗುಡ್ಡಗಾಡು, ಗುಡಿಸಲುಗಳಲ್ಲಿ ವಾಸಿಸುವ, ಒಂದು ಕಡೆ ನೆಲೆಯೂರದೆ ಊರಿಂದ ಊರಿಗೆ ಸಂಚಾರ ಮಾಡುತ್ತಾರೆ. ಅಲ್ಲದೇ ಇವರು ಪಕ್ಕಾ ಮಾಂಸಹಾರಿಗಳು, ಮಾದಕ ಪಾನೀಯ ಸೇವನೆ ಮಾಡುತ್ತಾರೆ ಎಂದು ಹೇಳಿದರು.ಇವರ ಸಂಪ್ರದಾಯ, ವೃತ್ತಿ ಭಕ್ತಿ ಬೇಡುವುದು, ಚಾಪೆ ಹೆಣೆಯುವುದು, ಗಿಳಿಶಾಸ್ತ್ರ ಸೇರಿದಂತೆ ಹಲವು ವೃತ್ತಿಗಳನ್ನು ಮಾಡುತ್ತಾ, ಸಾರ್ವಜನಿಕರು ನೀಡಿದ ದಾನ ಧರ್ಮ ಸ್ವೀಕರಿಸಿಕೊಂಡು ಜೀವನ ಮಾಡುತ್ತಾರೆ. ಸಂವಿಧಾನದ ಅನುಚ್ಚೇದದ ಪ್ರಕಾರ ಪರಿಶಿಷ್ಠರ ಪಟ್ಟಿಯಲ್ಲಿ ಇದ್ದು, ಬೇಡಜಂಗಮ, ಬುಡ್ಗ ಜಂಗಮ ಜಾತಿಗಳು ಪರಿಶಿಷ್ಟ ಜಾತಿಗೆ ಸೇರುತ್ತವೆ ಎಂದು ಮಾಹಿತಿ ನೀಡಿದರು.ಕುಲಶಾಸ್ತ್ರೀಯ ಅಧ್ಯಯನದ ಪ್ರಕಾರ ೧ ಲಕ್ಷ ಜನಸಂಖ್ಯೆ ಹೊಂದಿರುವ ರಾಜ್ಯದ ಗಡಿಭಾಗಗಳಲ್ಲಿ ವಾಸಿಸುತ್ತಿದ್ದು, ಅಕ್ಷರ ಜ್ಞಾನ ಕಡಿಮೆ ಇರುತ್ತದೆ. ಇವರ ಸಂಪ್ರದಾಯವೇ ಬೇರೆ, ರಾಜ್ಯದಲ್ಲಿನ ಬೇಡ, ಬುಡಗ ಜಂಗಮಕ್ಕೂ ಲಿಂಗಾಯತ ಜಂಗಮರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಧ್ಯಯನದಲ್ಲೇ ತಿಳಿಸಲಾಗಿದೆ. ಆದರೂ ರಾಜ್ಯದ ಕೆಲವೆಡೆ ಕೆಲವರು ತಮ್ಮ ಮಕ್ಕಳ ಶಾಲಾ ದಾಖಲೆಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಕೆಲ ಅಧಿಕಾರಿಗಳು ಅರ್ಹರಲ್ಲದವರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡಿದ್ದು, ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.ಕಾರಣ ರಾಜ್ಯದ ಮುಖ್ಯಮಂತ್ರಿಗಳು ಈ ಕೂಡಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಗಳು, ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಡಿಎಸ್‌ಎಸ್‌ನ ಪದಾಧಿಕಾರಿಗಳು ಇದ್ದರು.