ಛೋಟಾ ರಾಜನ್ ಸೇರಿ ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟ

ಮುಂಬೈ, ಜ.4- ಭೂಗತ ಪಾತಕಿ ಛೋಟಾ ರಾಜನ್ ಸೇರಿದಂತೆ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಮುಂಬೈ ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ನಂದು ವಾಜೇಕರ್ ಎಂಬ ಪನ್ವೇಲ್ ಬಿಲ್ಡರ್ ಗೆ ರಾಜನ್ ಬೆದರಿಕೆ ಒಡ್ಡಿದ್ದ ಪಕರಣ ಹಾಗೂ ರಾಜನ್ ವಾಜೇಕರ್ ನಿಂದ 26 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ಸುರೇಶ್ ಶಿಂಧೆ, ಲಕ್ಷ್ಮಣ ನಿಕಮ್ ಅಲಿಯಾಸ್ ದಡಾಯ, ಸುಮಿತ್ ವಿಜಯ್ ಮಾತ್ರೆ ಮತ್ತು ಛೋಟಾ ರಾಜನ್ ಗೆ
ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ನಂದು ವಾಜೇಕರ್ ಎಂಬ ಬಿಲ್ಡರ್ 2015ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದು, 2 ಕೋಟಿ ರೂ ಕಮಿಷನ್ ಅನ್ನು ಪರಮಾನಂದ್ ಠಕ್ಕರ್ ಎಂಬ ಏಜೆಂಟ್ ಗೆ ನೀಡಲು ನಿರ್ಧರಿಸಲಾಗಿತ್ತು.

ಆದರೆ, ಥಾಕರ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರು, ವಾಜೇಕರ್ ಅದನ್ನು ಒಪ್ಪಲಿಲ್ಲ. ನಂತರ ಥಾಕರ್ ಛೋಟಾ ರಾಜನ್ ನನ್ನು ಸಂಪರ್ಕಿಸಿ, ತನ್ನ ಕೆಲವರನ್ನು ವಾಜೇಕರ್ ಕಚೇರಿಗೆ ಕಳುಹಿಸಿ 26 ಕೋಟಿ ರೂಪಾಯಿಗಳಿಗೆ ಬೇಡಿಕೆ ಯಿಟ್ಟಿದ್ದ ಮತ್ತು ವಜೇಕರ್ ನನ್ನು ಕೊಲ್ಲುವುದಾಗಿ ಬೆದರಿಕೆ ಯನ್ನು ಹಾಕಿದ್ದ ಎನ್ನಲಾಗಿದೆ.