
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17: ಹೈದರಾಬಾದ್ ಕರ್ನಾಟಕ ಭಾಗವನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಿಗೊಳಿಸಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಸಿದ ಸವಿ ನೆನಪಿಗಾಗಿ ಪ್ರತೀ ವರ್ಷ 17 ರಂದು ಈ ಭಾಗದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಇದರ ಅಂಗವಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯಲ್ಲಿ ಭಾನುವಾರ ನಡೆದ `ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ’ಯಲ್ಲಿ ಅಧ್ಯಕ್ಷ ಸಿ. ಶ್ರೀನಿವಾಸರಾವ್, ಶ್ರೀ.ಸರದಾರ್ ವಲ್ಲಬಾಯಿ ಪಟೇಲ್ ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶವೀಗ ಕಲ್ಯಾಣ ಕರ್ನಾಟಕವಾಗಿ ನಾಮಕರಣಗೊಂಡಿದೆ. ಭಾರತ ದೇಶಕ್ಕೆ 1947 ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕು, ಒಕ್ಕೂಟ ವ್ಯವಸ್ಥೆಯಲ್ಲಿ ದೇಶ ಒಗ್ಗೂಡುತ್ತಿದ್ದರೂ ಹೈದರಾಬಾದ್ನ ನಿಜಾಮರು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಕ್ಕೂಟಕ್ಕೆ ಸೇರಿಸಲು ನಿರಾಕರಿಸಿದಾಗ ಈ ಭಾಗದಲ್ಲಿ ಎರಡನೆಯ ಸ್ವಾತಂತ್ರ್ಯ ಚಳವಳಿ ನಡೆಯಿತು. ಜನರು ಈ ಭಾಗವನ್ನು ಸರ್ದಾರ್ ವಲ್ಲಭಾಬಾಯಿ ಪಟೇಲ್ ಅವರ ದಿಟ್ಟತನದ ನಿರ್ಧಾರಗಳಿಂದ ಈ ಭಾಗವು ಒಕ್ಕೂಟ ವ್ಯವಸ್ಥೆಯನ್ನು ಸೇರಿತು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರಿಡ್ಡಿ ಅವರು, ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದರೂ ಹೈದರಾಬಾದ್ ಕರ್ನಾಟಕದ ಭೂಭಾಗದಲ್ಲಿ ನಿಜಾಮರ ಆಡಳಿತಕ್ಕೆ ಅಂತ್ಯ ಹಾಡಲು ಭಾರತದ ಉಕ್ಕಿನ ಮನುಷ್ಯ, ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಡೆಸಿದ್ದ `ಆಪರೇಷನ್ ಪೋಲೋ’ ಮಿಟಲಿಟರಿ ಕಾರ್ಯಾಚರಣೆ ಯಶಸ್ವಿಯಾಗಿ ಈ ಭಾಗವು ಭಾರತದ ಒಕ್ಕೂಟವನ್ನು ಸೇರಿತು. ಕಾರಣ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲ್ಪಡುತ್ತಿದೆ ಎಂದರು.
ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಬಿ. ಮಹಾರುದ್ರಗೌಡ, ಎ. ಮಂಜುನಾಥ್, ಕೆ.ರಮೇಶ ಬುಜ್ಜಿ, ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್. ದೊಡ್ಡನಗೌಡ, ಶ್ರೀ ಸೊಂತಗಿರಿಧರ, ಉಪಸಮಿತಿಗಳ ಚೇರ್ಮನ್ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.