ಛಾಯಾಚಿತ್ರ ಸ್ಪರ್ಧೆ ಶ್ರೀಕಂಠಗೆ ಪ್ರಶಸ್ತಿ

ಬೆಂಗಳೂರು, ಮಾ. ೨೪- ದೆಹಲಿಯ ವೈಲ್ಡ್ ಲೈಫ್ ಫೊಟೋಗ್ರಾಫಿ ಆಸೊಶಿಯೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ಫೊಟೋ ಕಲ್ಟ್ -೨೦೨೧ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಂಗಳೂರಿನ ೧೫ ವಯಸ್ಸಿನ ಬಾಲಕ ಶ್ರೀಕಂಠ ಎಚ್. ಬ್ಯಾಕೋಡ ಅವರಿಗೆ ಪ್ರಶಸ್ತಿ ಲಭಿಸಿದೆ.
೪೦ ಕ್ಕೂ ಹೆಚ್ಚು ದೇಶಗಳಿಂದ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಶಸ್ತಿ ವಿಜೇತರ ಪೈಕಿ ಹಾಗೂ ಭಾಗವಹಿಸಿದವರಲ್ಲಿ ಶ್ರೀಕಂಠ ಅತೀ ಕಿರಿಯ ವಯಸ್ಸಿನ ವನ್ಯಜೀವ ಛಾಯಾಗ್ರಾಹಕನಾಗಿದ್ದಾನೆ.


ಹೆಣ್ಣು ಕರಡಿಯೊಂದು ತನ್ನ ಮರಿಗಳೊಂದಿಗೆ ಸಂಚರಿಸುವ ಚಿತ್ರಕ್ಕೆ ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಹುಲಿ ಚಿತ್ರವೊಂದು ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಒಟ್ಟು ೫ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀಕಂಠ ಅವರ ಒಟ್ಟು ೨೮ ಕಲಾತ್ಮಕ ಛಾಯಾಚಿತ್ರಗಳು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಬೆಂಗಳೂರಿನ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯ ಕೆಎಸ್‌ವಿಕೆ ಶಾಲೆಯಲ್ಲಿ ೯ನೇಯ ತರಗತಿಯಲ್ಲಿ ಓದುತ್ತಿರುವ ಶ್ರೀಕಂಠ ಎಚ್. ಬ್ಯಾಕೋಡ ಕಳೆದ ಮೂರು ವರ್ಷಗಳಿಂದ ಛಾಯಾಗ್ರಹಣ ಕಲೆಯನ್ನು ಹವ್ಯಾಸವನ್ನಾಗಿ ರೂಢಿಸಿಕೊಂಡಿದ್ದಾರೆ. ಸೀ ಸನ್ ಫೋಟೋಗ್ರಾಫಿಕ್ ಕ್ಲಬ್‌ನ ಸದಸ್ಯರಾಗಿರುವ ಶ್ರೀಕಂಠ ಎಚ್. ಬ್ಯಾಕೋಡ ಈಗಾಗಲೇ ಒಟ್ಟು ಹತ್ತು ದೇಶಗಳಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗಹಿಸಿದ್ದು, ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಅಲ್ಲದೆ ಇತ್ತೀಚಿಗೆ ಕೊಲ್ಕತ್ತಾದಲ್ಲಿ ನಡೆದ ಐರಿಸ್ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೂಡ ಅತ್ಯುತ್ತಮ ಯುವ ಛಾಯಾಗ್ರಾಹಕ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.