ಛಾಯಾಗ್ರಾಹಕನ ಮೇಲೆ ಹಲ್ಲೆ:ಕಾನೂನು ಕ್ರಮಕ್ಕೆ ಆಗ್ರಹ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ23: ಬೆಂಗಳೂರಿನಲ್ಲಿ ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ, ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಸದಸ್ಯರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುಧವಾರ ಮನವಿಪತ್ರ ರವಾನಿಸಿದರು.
ಬೆಂಗಳೂರಿನ ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಯೊಂದರಲ್ಲಿ ವಿಡಿಯೋ ಶೂಟಿಂಗ್‍ಗೆ ತೆರಳಿದ್ದ ಛಾಯಾಗ್ರಾಹಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮದುವೆ ಸಮಾರಂಭದಲ್ಲಿದ್ದ ಕೆಲ ಪುಂಡರು ಹಲ್ಲೆ ನಡೆಸಿ ಗಾಯಗೊಳಿಸಿರುವುದು ಖಂಡನೀಯ. ಹೊಟ್ಟೆಪಾಡಿಗಾಗಿ ವಿಡಿಯೋ ಶೂಟಿಂಗ್ ಮಾಡುವ ಛಾಯಾಗ್ರಾಹಕನ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಘಟನೆಯಾಗಿದೆ ಎಂದು ಸಂಘ ಖಂಡಿಸಿದೆ.
ಛಾಯಾಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲದಾಗಿದೆ. ಈ ಬಗ್ಗೆ ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷರು ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ವೃತ್ತಿನಿರತ ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಹಲ್ಲೆಗೊಳಗಾಗಿರುವ ಛಾಯಾಗ್ರಾಹಕನಿಗೆ ಸರ್ಕಾರ ಪರಿಹಾರ ನೀಡಬೇಕು. ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ತಯಾಬ್ ಹುಸೇನ್, ಜಿ. ಸುರೇಶ್, ಎ.ಎಂ. ಮಲ್ಲಿಕಾರ್ಜುನಗೌಡ, ಸಂಜಯ್‍ಕುಮಾರ, ಗುಜ್ಜಲ ರಾಮು, ಜೆ. ಮಂಜುನಾಥ, ಪಿ. ಅನಿಲ್‍ಕುಮಾರ, ಸಂಜಯ್ ಛಲವಾದಿ, ಚಂದ್ರಶೇಖರ್, ಗಣೇಶ್, ಪಿ. ಮಾರುತಿ, ಆನಂದಕುಮಾರ, ವಿರೂಪಾಕ್ಷಿ ಮತ್ತಿತರರಿದ್ದರು.