ಛಲವಿದ್ದರೆ ಸಾಧನೆ ಸಾಧ್ಯ: ಡಾ. ಬೆಲ್ದಾಳೆ

ಬೀದರ್:ಜು.1: ಛಲವಿದ್ದರೆ ಜೀವನದಲ್ಲಿ ಸಾಧನೆ ಸಾಧ್ಯ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಯುನೈಟೆಡ್ ಕಿಂಗ್‍ಡಂ ಕನ್ನಡ ಸಾಹಿತ್ಯ ಪರಿಷತ್ ಯುವ ಗೌರವ ಸಂಚಾಲಕರಾಗಿ ನೇಮಕಗೊಂಡ ಆದೀಶ್ ರಜನೀಶ್ ವಾಲಿ ಅವರಿಗೆ ಆಯೋಜಿಸಿದ್ದ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಧನೆಗೆ ಏನೇನು ಬೇಕೋ ಅದೆಲ್ಲವೂ ನಮ್ಮೊಳಗೇ ಇದೆ. ನಾವು ಪ್ರಯತ್ನ ಪಡಬೇಕಷ್ಟೇ ಎಂದು ಹೇಳಿದರು.

ನಾಡು, ದೇಶ, ಸಮಾಜಕ್ಕಾಗಿ ಮಾಡಿದ ಕಾರ್ಯಗಳು ಗೌರವ ತಂದುಕೊಡುತ್ತವೆ. ಲಂಡನ್‍ನಲ್ಲಿ ನಡೆದ ಘಟಿಕೋತ್ಸವದಲ್ಲಿ ಕನ್ನಡ ಬಾವುಟ ಹಾರಿಸಿ ಕರುನಾಡ ಕೀರ್ತಿ ಬೆಳಗಿದ ಬೀದರ್‍ನ ಪ್ರತಿಭೆ ಆದೀಶ್ ವಾಲಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದರು.

ಆದೀಶ್ ವಾಲಿ ಅವರಿಗೆ ಉಜ್ವಲ ಭವಿಷ್ಯ ಇದೆ. ಅವರ ಕನ್ನಡಾಭಿಮಾನ ಹಾಗೂ ದೇಶಾಭಿಮಾನ ಯುವಕರಿಗೆ ಮಾದರಿಯಾಗಬೇಕು ಎಂದರು.

ಆದೀಶ್ ವಾಲಿ ಮಾತನಾಡಿ, ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಏನಾಗಬೇಕು ಎನ್ನುವ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಅದನ್ನು ನನಸಾಗಿಸಲು ನಿರಂತರ ಶ್ರಮಿಸಬೇಕು. ಅಂದಾಗ ಮಾತ್ರ ಗುರಿ ತಲುಪಬಹುದು ಎಂದು ಹೇಳಿದರು.

ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವ ಸೂಕ್ತ ನಿರ್ಣಯಗಳು ವ್ಯಕ್ತಿಯನ್ನು ಉತ್ತುಂಗಕ್ಕೆ ಒಯ್ಯುತ್ತವೆ. ಆತ್ಮವಿಶ್ವಾಸದೊಂದಿಗೆ ಕಠಿಣ ಪರಿಶ್ರಮ ವಹಿಸಿದ್ದರಿಂದಲೇ ನನಗೆ ವಿವಿಧ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಹಾಗೂ ವಿದೇಶಿ ನೆಲದಲ್ಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಗೌರವ ಸದಸ್ಯತ್ವ ನೀಡಿ, ಯುನೈಟೆಡ್ ಕಿಂಗ್‍ಡಂ ಕನ್ನಡ ಸಾಹಿತ್ಯ ಪರಿಷತ್ ಯುವ ಗೌರವ ಸಂಚಾಲಕನಾಗಿ ನೇಮಕ ಮಾಡಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪ್ರೊ. ಪೂರ್ಣಿಮಾ ಜಿ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಮತ್ತಿತರರು ಮಾತನಾಡಿ, ಆದೀಶ್ ವಾಲಿ ಅವರ ಶೈಕ್ಷಣಿಕ ಸಾಧನೆ, ನಾಡು, ನುಡಿ, ಸಂಸ್ಕøತಿಯ ಬಗೆಗಿನ ಅಭಿಮಾನ, ದೂರದೃಷ್ಟಿಯನ್ನು ಕೊಂಡಾಡಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು.

ಹುಲಸೂರಿನ ಶಿವಾನಂದ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಕೆಆರ್‍ಇ ನ್ಯಾಸ್ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಎಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ, ಅಂಜನಾ ವಾಲಿ, ದೀಪಕ್ ವಾಲಿ, ಭೀಮಣ್ಣ ಹಡಪದ, ವಿಜಯಕುಮಾರ ಪಾಟೀಲ ಯರನಳ್ಳಿ, ಡಾ,. ಪಿ. ವಿಠ್ಠಲರೆಡ್ಡಿ, ದೀಪಾ ರಾಗಾ, ಮಲ್ಲಿಕಾರ್ಜುನ ಕನಕಟ್ಟೆ, ಲಲಿತಾ ಸ್ವಾಮಿ, ಶೀಲಾ ದಿವಾಕರ್ ಮೊದಲಾದವರು ಇದ್ದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವಶಂಕರ ಟೋಕರೆ ಸ್ವಾಗತಿಸಿದರು. ವೀಣಾ ಜಲಾದೆ ನಿರೂಪಿಸಿದರು.