ಛಲವಾದಿ ಸಮುದಾಯಕ್ಕೆ ಮೂಲಸೌಕರ್ಯ ಕಲ್ಪಿಸಲು ಮನವಿ – ಸೋಮಶೇಖರ ಬಣ್ಣದಮನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 3 :- ಛಲವಾದಿ ಸಮುದಾಯವು ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದು ಸಮುದಾಯದ ಏಳ್ಗೆಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯವನ್ನು ಶಾಸಕರು ಹೆಚ್ಚಿನ ಕಾಳಜಿ ವಹಿಸಿ ಒದಗಿಸುವಂತೆ ಛಲವಾದಿ ಮಹಾಸಭಾದ ನೂತನ ವಿಜಯನಗರ ಜಿಲ್ಲಾಧ್ಯಕ್ಷ ಸೋಮಶೇಖರ ಬಣ್ಣದಮನೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರಿಗೆ ಮನವಿ ಮಾಡಿದ್ದಾರೆ.
ಅವರು ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಛಲವಾದಿ ಮಹಾಸಭಾದ ವತಿಯಿಂದ ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಡಾ ಎನ್ ಟಿ ಶ್ರೀನಿವಾಸ ಅವರಿಗೆ ಭಾರತ ಸಂವಿಧಾನ ಪುಸ್ತಕ ಹಾಗೂ ಒನಕೆ ಓಬವ್ವ ಚಿತ್ರದ ಮೊಮಿಂಟ್ಸ್ ನೀಡಿ ಅಭಿನಂದನೆ ಸಲ್ಲಿಸಿ ಮಾತನಾಡುತ್ತ ಛಲವಾದಿ ಸಮುದಾಯವು ಕ್ಷೇತ್ರದ ನರಸಿಂಹಗಿರಿ, ಇಮಡಾಪುರ, ಹಿರೇಕುಂಬಳಗುಂಟೆ, ತೂಲಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಾಸವಾಗಿದ್ದು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಶಿಕ್ಷಣ ಸೇರಿದಂತೆ ಸಮುದಾಯದ ಏಳ್ಗೆಗೆ ಹೆಚ್ಚಿನ ಕಾಳಜಿವಹಿಸಿ ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಸಮುದಾಯದ ಅಭಿವೃದ್ಧಿಯಾಗಬಲ್ಲದು  ಎಂದು ಶಾಸಕರಲ್ಲಿ ಮನವಿ ಮಾಡಿದರು.
ಮಾನವಹಕ್ಕು ಹಿತರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷರಾದ ಈರಮ್ಮ ಬಸವರಾಜ ಅವರು ಮಾತನಾಡಿ ಕೂಡ್ಲಿಗಿ ಕ್ಷೇತ್ರ ಆರ್ಥಿಕವಾಗಿ ಹಿಂದುಳಿದ ಕ್ಷೇತ್ರವಾಗಿರಬಹುದು ಆದರೆ ಐತಿಹಾಸಿಕ ನೆಲೆಯ ಬೀಡಾಗಿದೆ ಅಲ್ಲದೆ ಪಾಳೇಗಾರರ ಪೌರುಷದ ನಾಡು ಎಂದರೆ ಅದು ಕೂಡ್ಲಿಗಿ ಕ್ಷೇತ್ರ,  ಮತ್ತು ನಾಡು ಕಂಡ  ವೀರವನಿತೆ ಒನಕೆ ಓಬವ್ವ ಛಲವಾದಿ ಸಮುದಾಯದ ಮಹಿಳೆಯಾಗಿದ್ದು ಆ ವೀರಮಹಿಳೆಯ ತವರೂರು ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಾಗಿದೆ ಇಂತಹ ಸ್ಥಳದಲ್ಲಿ ಓಬವ್ವನ ಉತ್ಸವ, ಆ ವೀರಮಹಿಳೆ ಹೆಸರಲ್ಲಿ ಉದ್ಯಾನವನ ಹಾಗೂ ವೃತ್ತಗಳು ಇಲ್ಲದೆ ಇರುವುದು ವಿಷಾದದ ಸಂಗತಿಯಾಗಿದ್ದು ನೂತನ ಶಾಸಕರು ಓಬವ್ವರ ಹೆಸರಿನಲ್ಲಿ ಶಾಶ್ವತ ಹೆಸರಿನ ಕಾರ್ಯ ಮಾಡುವಂತೆ ವಿನಂತಿ ಮಾಡಿದರು.
ಛಲವಾದಿ ಮಹಾಸಭಾದ ನೂತನ ಅಧ್ಯಕ್ಷ ಮರಬನಹಳ್ಳಿ ಮಾರಪ್ಪ ಮಾತನಾಡಿ ಕ್ಷೇತ್ರದಲ್ಲಿ ಛಲವಾದಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರದ ಸೌಲಭ್ಯ ಒದಗಿಸಿದಲ್ಲಿ ಆರ್ಥಿಕವಾಗಿ ಪ್ರಬಲರಾಗುವ ಮೂಲಕ ಕ್ಷೇತ್ರದಲ್ಲಿ ಸ್ವಾವಲಂಬನೆ ಜೀವನ ನಡೆಸುತ್ತಾರೆ ಎಂದು ಶಾಸಕರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ನರಸಿಂಹಗಿರಿ ಪ್ರಕಾಶ, ಆಲೂರು ಲೋಕೇಶ, ಇಮಡಾಪುರ ನಾಗರಾಜ, ತೂಲಹಳ್ಳಿ ಹೊಟ್ಟೇರ್ ಅಜ್ಜಪ್ಪ, ಕಾರ್ಯದರ್ಶಿ ಮಾರಪ್ಪ, ಓಬಳೇಶ, ರಾಮಕೃಷ್ಣ, ವೀರಭದ್ರಿ, ಮಾರೇಶ, ಮತ್ತು ಜಿ ಪಂ ಮಾಜಿ ಸದಸ್ಯ ವೆಂಕಟೇಶ ಇತರರು ಸೇರಿ ಶಾಸಕ ಡಾ ಶ್ರೀನಿವಾಸ ಅವರನ್ನು ಅಭಿನಂದಿಸಿ ಸಮುದಾಯದ ಪರ ಏಳ್ಗೆಗೆ ಮನವಿ ಸಲ್ಲಿಸಿದರು.