ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪದಚ್ಯುತಿ

ರಾಯಚೂರು,ಮಾ.೩೦- ಛಲವಾದಿ ಮಹಾಸಭಾ ಬೈಲಾವನ್ನು ಉಲ್ಲಂಘನೆ ಮಾಡಿರುವ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಂಚಾಲ್ ಇವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಛಲವಾದಿ ಮಹಾಸಭಾ ರಾಯಚೂರು,ಕೊಪ್ಪಳ ಜಿಲ್ಲೆಯ ರಾಜ್ಯ ನಿರ್ದೇಶಕ ಹಾಗೂ ಜಿಲ್ಲಾ ಪ್ರಭಾರಿ ಎಂ.ವಸಂತ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೯-೯-೨೦೨೨ ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕಾರ್ಯಕಾರಿ ಸಮಿತಿಯು ಕೆಲವು ನಿರ್ಣಯಗಳನ್ನು ತೆಗೆದುಕೊಂಡು ರಾಜ್ಯ ಸಮಿತಿಗೆ ಆಯ್ಕೆಯಾದ ನಿರ್ದೇಶಕರುಗಳಿಗೆ ಆಯಾ ಜಿಲ್ಲಾ ಪ್ರಭಾರವನ್ನು ವಹಿಸಿದ್ದಾರೆ.ಅದರಂತೆ ನನಗೆ ರಾಯಚೂರು ಮತ್ತು ಕೊಪ್ಪಳ ಪ್ರಭಾರ ವಹಿಸಿಕೊಂಡು ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿ,ತಾಲ್ಲೂಕ ಸಮಿತಿ,ಹೋಬಳಿ ಸಮಿತಿ ಗ್ರಾಮ ಸಮಿತಿಗಳನ್ನು ರಚಿಸಲು ಸೂಚಿಸಿದ್ದಾರೆ.ಅದರಂತೆ ೧೬-೧೦-೨೦೨೨ ರಂದು ನನ್ನ ಅಧ್ಯಕ್ಷ್ಯತೆಯಲ್ಲಿ ಜಿಲ್ಲಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಸರ್ವಾನು ಮತದಿಂದ ಆಯ್ಕೆ ಮಾಡಿ ರಾಜ್ಯ ಸಮಿತಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ರಾಜ್ಯ ಸಮಿತಿಯು ಜಿಲ್ಲಾ ಸಮಿತಿಯನ್ನು ಅನುಮೋದನೆ ಮಾಡುವ ವೇಳೆ ಕೆಲವು ಷರತ್ತುಗಳನ್ನು ನೀಡಿ ಅನುಮೋದನೆ ಕೊಟ್ಟಿದ್ದಾರೆ.ಆದೇಶ ಪತ್ರ ನೀಡಿದ ದಿ.೨೧-೧೧-೨೦೨೨ ರಿಂದ ೩೧–೧೨-೨೨ ರ ಒಳಗೆ ಒಂದು ಸಾವಿರ ಸದಸ್ಯತ್ವ ಮಾಡಿ ನಗರ,ಗ್ರಾಮಾಂತರ,ತಾಲ್ಲೂಕ ಹಾಗೂ ಹೋಬಳಿಗಳಲ್ಲಿ ಕನಿಷ್ಟ ೩೦ ಜನರನ್ನು ತಂಡದಲ್ಲಿ ಸೇರಿಸಿಕೊಂಡು ಸದಸ್ಯತ್ವವನ್ನು ಖಚಿತ ಪಡಿಸಿಕೊಂಡು ಸಮಿತಿಗಳನ್ನು ರಚಿಸುವುದು.ಗ್ರಾಮ ಘಟಕಗಳನ್ನು ರಚಿಸುವುದು ಎಂಬ ಷರತ್ತು ವಿಧಿಸಿತ್ತು.ಆದರೆ ಜಿಲ್ಲಾಧ್ಯಕ್ಷರು ಇದುವರೆಗೂ ಯಾವುದೇ ಸದಸ್ಯತ್ವವನ್ನು ಪೂರ್ಣ ಮಾಡಿಲ್ಲ.ಹಾಗೂ ಜಿಲ್ಲೆಯ ರಾಯಚೂರು ತಾಲ್ಲೂಕು ಮತ್ತು ರಾಯಚೂರು ನಗರ ಸಮಿತಿಗಳನ್ನು ಹೊರತುಪಡಿಸಿ ಉಳಿದ ತಾ ಲ್ಲೂಕಗಳ ಸಮಿತಿಗಳನ್ನು ರಚಿಸಿದ್ದು, ಅವುಗಳ ಅನುಮೋದನೆಯನ್ನು ಇದುವರೆಗೂ ರಾಜ್ಯ ಸಮಿತಿಯಿಂದ ಪಡೆದಿಲ್ಲ. ಬೈಲಾದ ಪ್ರಕಾರ ಜಿಲ್ಲೆಯಲ್ಲಿ ೧೦೦೦ ಸದಸ್ಯತ್ವ ಇಲ್ಲದಿದ್ದ ಪಕ್ಷದಲ್ಲಿ ರಾಜ್ಯ ಸಮಿತಿಯ ನಿರ್ದೇಶಕರ ಶಿಫಾರಸ್ಸು ಮೇರೆಗೆ ರಾಜ್ಯ ಸಮಿತಿಯಿಂದ ಅನುಮೋದನೆ ಪಡೆಯಬೇಕು.ಇದನ್ನು ಉಲ್ಲಂಘಿಸಿದ್ದಲ್ಲದೆ, ಲಿಂಗಸೂಗೂರು ತಾಲೂಕಿನಲ್ಲಿ ಕೆಲವು ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿಯ ಲೀಟರೆಡ್ ನಲ್ಲಿ ನೇಮಕಾತಿ ಆದೇಶ ನೀಡಿದ್ದು, ಸಂಪೂರ್ಣವಾಗಿ ಬೈಲಾ ಉಲ್ಲಂಘನೆ ಮಾಡಿದ್ದಾರೆ ಎಂದರು.
ದಿ.೩-೩-೨೦೨೩ ರಂದು ಲಿಂಗಸುಗೂರಿನಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಂಡ ಸಮಾವೇಶಕ್ಕೆ ಮೊದಲು ೧-೩-೨೦೨೩ ರಂದು ರಾಜ ನಿರ್ದೇಶಕರು ಜಿಲ್ಲಾ ಸಮಿತಿ ಹಾಗೂ ತಾಲೂಕ ಸಮಿತಿಗಳನ್ನು ಸಮಾವೇಶ ಕುರಿತು ಚರ್ಚಿಸಲು ಸಾಮಾಜಿಕ ಜಾಲತಾಣದ ಮೂಲಕ ಸಭೆಯನ್ನು ಕರೆಯಲಾಗಿ, ಸದರಿ ಸಭೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಈ ಸಭೆಯು ಜಿಲ್ಲಾ ಸಮಿತಿಯಿಂದ ಕರೆಯಲಾಗಿಲ್ಲ. ಈ ಸಭೆಗೆ ಜಿಲ್ಲೆಯ ಯಾವುದೇ ತಾಲೂಕಿನ ಪದಾಧಿಕಾರಿಗಳು ಹಾಗೂ ಅಧ್ಯಕ್ಷರುಗಳು ಭಾಗವಹಿಸಬಾರದೆಂದು ಮರು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ರಾಜ್ಯ ಸಮಿತಿಯ ಆದೇಶವನ್ನು ಉದ್ದೇಶ ಪೂರಕವಾಗಿ ಉಲ್ಲಂಘನೆ ಮಾಡಿರುವ ಹಿನ್ನಲೆ ಜಿಲ್ಲಾಧ್ಯಕ್ಷರನ್ನು ಹಾಗೂ ಪ್ರಧಾನ ಕಾರ್ಯದರ್ಶಿನ್ನು ಪದಚ್ಯುತಿ ಮಾಡಲಾಗಿದೆ ಎಂದ ಅವರು ಶೀಘ್ರದಲ್ಲಿ ಜಿಲ್ಲಾ ಸಮಿತಿಯ ಕಾರ್ಯಕಾರಣಿ ಸಭೆಯನ್ನು ಜಿಲ್ಲಾ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆದು ಅಡಕ್ ಕಮಿಟಿಯನ್ನು ರಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿ. ಎ.ದೊಡ್ಡಮನಿ,ವಿಜಯ ಪ್ರಸಾದ್, ಬಸವರಾಜ ಗಟ್ಟು ಸೇರಿದಂತೆ ಇತರರು ಉಪಸ್ಥಿತರಿದ್ದರು.