ಛಲವಾದಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ


ಜಗಳೂರು.ನ.೨೨; ರಾಜ್ಯದ ಪರಿಶಿಷ್ಟ ಜಾತಿ ಜನ ಸಂಖ್ಯೆಯಲ್ಲಿ ಛಲವಾದಿ ಸಮಾಜ ಅಧಿಕ ಸಂಖ್ಯೆಯಲ್ಲಿದ್ದು, ಸಮಾಜದ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಛಲವಾದಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ತಾಲ್ಲೂಕು ಛಲವಾದಿ ಸಮಾಜದ ವತಿಯಿಂದ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ಡಾ.ನಾಗವೇಣ ರವರಿಗೆ ಮನವಿ ಸಲ್ಲಿಸಿ ಛಲವಾದಿ ಸಮಾಜದ ಗೌರವಾಧ್ಯಕ್ಷ ಸಿ. ಲಕ್ಷ್ಮಣ ಮಾತನಾಡಿ ರಾಜ್ಯದಲ್ಲಿ ಛಲವಾದಿ ಸಮಾಜ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಹೊಂದಿದೆ ಇನ್ನೂ ಕೂಡ ಸಾಮಾಜೀಕ, ಅರ್ಥಿಕ, ಶೈಕ್ಷಣ ಕವಾಗಿ ಹಿಂದುಳಿದ ಸಮುದಾಯವಾಗಿದ್ದು ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ಪರಿಶಿಷ್ಟ ಜಾತಿಯ ಇತರೆ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಮಾಡಿದ್ದು, ಅದರಿಂತೆ ನಮಗೂ ಸಹ ಛಲವಾದಿ ಅಭಿವೃದ್ದಿ ನಿಗಮ ಸ್ಥಾಪಿಸಿ, ಸಮುದಾಯದ ಏಳಿಗೆಗೆ ಸೂಕ್ತ ಅನುದಾನ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಸಮಾಜದ ಯುವ ಮುಖಂಡ ಧನ್ಯಕುಮಾರ್ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಹಲವು ಹಿಂದುಳಿದ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಪ್ರಾಧಿಕಾರ ಸ್ಥಾಪಿಸುವ ಮೂಲಕ ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದು ಅದರಂತೆ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಛಲವಾದಿ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಪರಿಶಿಷ್ಟ ಜಾತಿಯ ನೂರಾ ಒಂದು ಜಾತಿಗಳು ಸಹ ಸೌಲಭ್ಯ ಪಡೆದುಕೊಳ್ಳಲಿವೆ. ಈಗಿದ್ದರು ಸಹ ಕೆಲ ಸಹೋದರ ಸಮಾಜಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಅದರಂತೆ ಛಲವಾದಿ ಸಮಾಜಕ್ಕೂ ಸಹ ಪ್ರತ್ಯೇಕ ನಿಗಮ ಅವಶ್ಯಕತೆ ಇದ್ದು, ಮುಖ್ಯಮಂತ್ರಿಗಳು ಬೇಡಿಕೆಯನ್ನ ಈಡೇರಿಸಬೇಕೆಂದು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಛಲವಾದಿ ಸಮಾಜದ ಶಾಸಕರಿಗೆ ಅವಕಾಶ ನೀಡಿ ಸಚಿವ ಸ್ಥಾನ ಕಲ್ಪಿಸಬೇಕು. ಬಿಜೆಪಿ ಸರ್ಕಾರದಲ್ಲಿ ಛಲವಾದಿ ಸಮಾಜಕ್ಕೆ ಸಾಮಾಜೀಕ ನ್ಯಾಯ ಕಲ್ಪಿಸಿಲ್ಲ. ಪಕ್ಷೇತರ ಶಾಸಕರೊಬ್ಬರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆಂಬ ಕಾರಣಕ್ಕೆ ಸಚಿವ ಸ್ಥಾನ ಕಲ್ಪಿಸಲಾಗಿದೆ. ಆದರೆ ಬಿಜೆಪಿ ಪಕ್ಷದಲ್ಲಿ ಮೂರ್‍ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಛಲವಾದಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿದರು.ಈ ಸಂದಂರ್ಭದಲ್ಲಿ ಛಲವಾದಿ ಸಮಾಜದ ತಾಲ್ಲೂಕು ಅಧ್ಯಕ್ಷ ಹೆಚ್.ಬಿ. ನಿಜಲಿಂಗಪ್ಪ, ಸಂಘಟನಾ ಕಾರ್ಯದರ್ಶಿ ಹೆಚ್. ತಿಪ್ಪೇಸ್ವಾಮಿ, ಮುಖಂಡ ಬಿದರಕೆರೆ ಬಸವರಾಜ್, ಮಹಾಂತೇಶ್ ಸೇರಿದಂತೆ ಹಲವರು ಇದ್ದರು.
೨೨ಡಿಪಿಹೆಚ್೧