ಛತ್ತೀಸ್‌ಘಡ ೭ ಮಂದಿ ನಕ್ಸಲೀಯರ ಹತ್ಯೆ

ರಾಯಪುರ,ಮೇ.೨೪- ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಬಿಜಾಪುರ ಗಡಿಭಾಗದ ನಾರಾಯಣಪುರ ಜಿಲ್ಲೆಯ ಅರಣ್ಯದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಏಳು ನಕ್ಸಲೀಯರು ಹತರಾಗಿದ್ದಾರೆ.
ನಾರಾಯಣಪುರ, ದಾಂತೇವಾಡ, ಬಸ್ತಾರ್‌ನ ಮೂರು ಜಿಲ್ಲೆಗಳ ಪಡೆಗಳನ್ನು ಒಳಗೊಂಡ ಪ್ರಮುಖ ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂಧಿ ಅಂತಿಮವಾಗಿ ೭ ಮಂದಿ ನಕ್ಸಲೀಯರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಪ್ಲಟೂನ್ ಸಂಖ್ಯೆ ೧೬, ಇಂದ್ರಾವತಿ ಏರಿಯಾ ಸಮಿತಿ ಮತ್ತು ಮರ್ಹ್ ವಿಭಾಗದ ಸಿಬ್ಬಂದಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ ಜಿಲ್ಲಾ ಮೀಸಲು ಗಾರ್ಡ್, ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆಗಳ ಜಂಟಿ ತಂಡ ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ತಿಳಿಸಿದ್ದಾರೆ.
ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ. ಇದು ಜಂಟಿ ಅಂತರ-ಜಿಲ್ಲಾ ಕಾರ್ಯಾಚರಣೆಯಾಗಿತ್ತು ಮತ್ತು ರೇಖವಾಯಾ ಅರಣ್ಯದ ಬಳಿ ಎರಡು ಎನ್‌ಕೌಂಟರ್‌ಗಳಲ್ಲಿ, ಎರಡು ಶವಗಳನ್ನು ನಾರಾಯಣಪುರ ಪಡೆಗಳು ಮತ್ತು ಐದು ನಕ್ಸಲ್ ಸಮವಸ್ತ್ರದ ದೇಹಗಳನ್ನು ದಂತೇವಾಡ ಪಡೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಎನ್‌ಕೌಂಟರ್ ಸ್ಥಳದಿಂದ ಏಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ದಾಂತೇವಾಡ ಪಡೆಗಳ ನೇತೃತ್ವವನ್ನು ಡಿಎಸ್ಪಿಗಳಾದ ರಾಹುಲ್ ಯುಕೆ ಮತ್ತು ಆಶಿಶ್ ನೇತಮ್ ವಹಿಸಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಏಳು ನಕ್ಸಲೀಯರ ಮೃತದೇಹಗಳನ್ನು ತರಲಾಗುತ್ತಿದೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿರುವ ಭದ್ರತಾ ಪಡೆಗಳೊಂದಿಗೆ ಅವರು ಸಂಪರ್ಕದಲ್ಲಿರುವುದರಿಂದ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

ಈ ವರ್ಷ ೧೧೨ ನಕ್ಸಲೀಯರ ಹತ್ಯೆ
ಛತ್ತೀಸ್‌ಘಡದಲ್ಲಿ ಕಳೆದ ಐದು ತಿಂಗಳ ಅವಧಿಯಲ್ಲಿ ಈ ವರ್ಷ ೧೧೨ ಮಂದಿ ನಕ್ಸಲೀಯರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಪ್ರಮುಖ ಎನ್‌ಕೌಂಟರ್‌ಗಳಲ್ಲಿ ಮೇ ೧೦ ರಂದು ಬಿಜಾಪುರದ ಪಿಡಿಯಾ ಗ್ರಾಮದಲ್ಲಿ ೧೨ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ತು ನಕ್ಸಲೀಯರು, ಏಪ್ರಿಲ್ ೧೬ ರಂದು ಕಂಕೇರ್‌ನಲ್ಲಿ ೨೯ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.