ಛಂಗನೆ ಗೋಡೆ ಏರಿದ ಸಚಿವ ಶರಣಪ್ರಕಾಶ್!

ಕಲಬುರಗಿ,ಜ 16: ಇಲ್ಲಿನ ಪಬ್ಲಿಕ್ ಗಾರ್ಡನ್ ಎದುರಿನ ಅತ್ಯಾಧುನಿಕ ಜಯದೇವ ಹೃದ್ರೋಗ ಆಸ್ಪತ್ರೆ ಕಟ್ಟಡದ ಅಂತಿಮ ಹಂತದ ಕಾಮಗಾರಿ ವೀಕ್ಷಿಸಲು ತೆರಳಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಚಂಗನೆ ಕಾಂಪೌಂಡ್ ಗೋಡೆ ಏರುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ನಡೆಯಿತು.
ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಚಿವರು ಎಲ್ಲವನ್ನೂ ನಿಧಾನವಾಗಿ ವೀಕ್ಷಿಸುತ್ತಾ, ಪಕ್ಕದ ಗೋಡೆಗೆ ಎರಡೂ ಕೈ ಆನಿಸಿ ಛಂಗನೆ ಮೇಲೇರಿ ಗೋಡೆಯ ಮತ್ತೊಂದು ಬದಿ ವೀಕ್ಷಿಸಿ ಕೆಳಗಿಳಿದರು. ಈ ದಿಢೀರ್ ಘಟನಾವಳಿ ಕಂಡು ಸ್ಥಳದಲ್ಲಿದ್ದ ಪತ್ರಕರ್ತರು ಅವಾಕ್ಕಾದರು.
ಕಾಮಗಾರಿ ವೀಕ್ಷಣೆ ಬಳಿಕ ಈ ಕುರಿತು ಸುದ್ದಿಗಾರರ ಕುತೂಹಲಕಾರಿ ಪ್ರಶ್ನೆಗೆ ಮುಗುಳ್ನಗುತ್ತ ಪ್ರತಿಕ್ರಿಯಿಸಿದ ಸಚಿವರು, “ಇಲ್ಲ ಇಲ್ಲ ನಾನು ಗೋಡೆ ಹಾರಿದ್ದಲ್ಲ ಅದು. ಆ ಗೋಡೆ ಪಕ್ಕದಲ್ಲಿ ಡ್ರೇನ್ ಏನಾದರೂ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಸ್ವಲ್ಪ ಗೋಡೆ ಏರಿ ನೋಡಿದೆ ಅಷ್ಟೇ” ಎಂದು ಸ್ಪಷ್ಟೀಕರಣ ನೀಡಿದಾಗ ಇಡೀ ವಾತಾವರಣದಲ್ಲಿ ನಗುವಿನ ಮಾರ್ದನಿ ಕೇಳಿಬಂದಿತು.ಈ ವೇಳೆ ನಿಮ್ಮ ಎನರ್ಜಿ ಗುಟ್ಟೇನು? ಎಂದು ತೂರಿಬಂದ ಪ್ರಶ್ನೆಗೆ, ಡೈಲಿ ವರ್ಕೌಟ್ ಎಂದು ಮುಗುಳ್ನಕ್ಕರು.