ಚೊಚ್ಚಲ ಮಹಿಳಾ ಉದ್ಯೋಗ ಮೇಳ ಯಶಸ್ವಿ

ಮೈಸೂರು:ನ.19:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಜುಕೇರ್ ಐಟಿಇಎಸ್, ವುಮೆನ್ ಕ್ಯಾನ್ ಫೌಂಡೇಶನ್ ಮತ್ತು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಚೊಚ್ಚಲ ಮಹಿಳಾ ಉದ್ಯೋಗ ಮೇಳ ಮತ್ತು ಮಹಿಳೆಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ನೂರಾರು ಯುವ ಸಮೂಹ ಪಾಲ್ಗೊಂಡು ಗಮನ ಸೆಳೆದವು.
ರಾಜ್ಯದ ನಾನಾ ಜಿಲ್ಲೆಗಳಿಂದ 40ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. 500ಕ್ಕೂ ಹೆಚ್ಚು ಮಹಿಳಾ ಉದ್ಯೋಗ ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಲ್ಲದೇ ಸಾವಿರಾರು ಯುವತಿಯರು ಆಗಮಿಸಿದ್ದರು. ಮಹಿಳೆಯರೇ ಉತ್ಪಾದಿಸಿದ್ದ ವಸ್ತುಗಳ ಪ್ರದರ್ಶನದ 40 ಮಳಿಗೆಗಳತ್ತಲೂ ಸಂಜೆವರೆಗೂ ಜನರು ಆಗಮಿಸಿದರು.
ಸಂಸದ ಪ್ರತಾಪಸಿಂಹ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಭಾವಂತ, ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗ ಸಿಗಬೇಕು. ಇದಕ್ಕೆ ಪೂರಕವಾಗಿ ಮೈಸೂರಿಗೆ ಕಂಪನಿಗಳು, ಕೈಗಾರಿಕೆಗಳು ಬರಬೇಕು ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಉದ್ಯಮ ಸ್ಥಾಪನೆ, ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಬ್ಬರನ್ನು ಮಾತ್ರ ತುಂಬಾ ಗೌರವಿಸುತ್ತೇನೆ, ಆದರಿಸುತ್ತೇನೆ. 4ಲೈನ್ ಹೈವೆನಾ ಮೈಸೂರಿಗೆ ಮಾಡಿದ್ದರು. ಇನ್ಫೋಸಿಸ್ ಟ್ರೈನಿಂಗ್ ಸೆಂಟರ್ ಇಲ್ಲಿಗೆ ಬಂದಿದೆ ಎಂದರೆ, ಅದು ಎಸ್.ಎಂ.ಕೃಷ್ಣ ಅವರ ಕೊಡುಗೆ. ಮೈಸೂರಲ್ಲಿ ರಿಂಗ್ ರೋಡ್ ಯೋಜನೆ ಮಾಡಿದವರೂ ಎಸ್.ಎಂ.ಕೃಷ್ಣ. ಅವರನ್ನು ಬಿಟ್ಟರೆ ವಿಜನರಿ ಸಿಎಂ ಕರ್ನಾಟಕಕ್ಕೆ ಸಿಗಲಿಲ್ಲ. ಎಲ್ಲರೂ ಕೃಷಿ ಆಧಾರಿತ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದರು ಎಂದು ಸ್ಮರಿಸಿದರು.
ಇವತ್ತು ಮಾಸ್ಟರ್ ಡಿಗ್ರಿ ಮಾಡಿದ 1300 ಮಂದಿ ಮೈಸೂರು ವಿವಿಯಲ್ಲಿ ಡಿ ಗ್ರೂಪ್ ನೌಕರರಾಗಿ ಇದ್ದಾರೆ. 12 ಸಾವಿರ ರೂ. ಸಂಬಳಕ್ಕೆ ಲಂಚ ಕೊಟ್ಟು ಒಳಗೆ ಸೇರಿಕೊಳ್ಳುತ್ತಾರೆ. ಪ್ರತಿಯೊಂದರಲ್ಲೂ ಭ್ರಷ್ಟಚಾರ ಇದೆ. ಕೆ-ಸೆಟ್ ಪರೀಕ್ಷೆ ಮಾಡ್ತಾರೆ, 4 ರಿಂದ 6 ಲಕ್ಷ ರೂ.ತೆಗೆದುಕೊಂಡು ಪಾಸ್ ಮಾಡಿಕೊಡ್ತಾರೆ. ಇದನ್ನು ಕೂಡ ಯುಜಿಸಿ ಜಗದೀಶ್ ಕುಮಾರ್ ಹತ್ತಿರ ಪ್ರಸ್ತಾಪಿಸಿ ಒಂದೂವರೆ ವರ್ಷದಿಂದ ಕೆ-ಸೆಟ್ ಪರೀಕ್ಷೆ ಆಗದಂತೆ ತಡೆದಿದ್ದೇನೆ. ನಿಜವಾದ ಪ್ರತಿಭಾವಂತ ಮಕ್ಕಳಿಗೆ ಮೋಸ ಆಗಬಾರದು, ಆದ್ಯತೆ ಸಿಗಬೇಕು ಎಂಬುದು ನನ್ನ ಉದ್ದೇಶ ಮೈಸೂರು ವಿವಿಯ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಾನು ರಿಯಲ್ ಎಸ್ಟೇಟ್ ಮಾಡಿಲ್ಲ
2ನೇ ಕ್ಲಾಸ್, 4ನೇ ಕ್ಲಾಸ್ ಓದಿರುವವರು ರಿಯಲ್ ಎಸ್ಟೇಟ್ ಮಾಡ್ತಿದ್ದಾರೆ. ನಾನು ಮಾಸ್ಟರ್ ಡಿಗ್ರಿ ಮಾಡಿ ಬಂದಿದ್ದೀನಿ. ನಾನು ಮಾಡಬಹುದಿತ್ತು. ಮೈಸೂರು ಜನ ನಾನು ಇಲ್ಲಿಗೆ ಬಂದಾಗ ಪ್ರೀತಿಯಿಂದ ನನ್ನನ್ನು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದಾರೆ. ಅವರ ಸೇವೆಯನ್ನು ಮಾಡಬೇಕು ಅನ್ನುವ ಕಾರಣಕ್ಕೆ ನಾನು ಬೆಂಗಳೂರು ಮತ್ತು ಮೈಸೂರು 10 ಲೈನ್ ಹೈವೆ ತಂದಿದ್ದೀನಿ. ಹೈವೆ ಬಂದ್ರೆ ಕೈಗಾರಿಕೆಗಳು, ಕಂಪನಿಗಳು ಬರುತ್ತವೆ. ಯುವ ಸಮುದಾಯಕ್ಕೆ ಕೆಲಸ ಸಿಗಲಿದೆ ಎಂಬುದು ನನ್ನ ಉದ್ದೇಶ. ನನ್ನಿಂದ ರಿಯಲ್ ಎಸ್ಟೇಟ್ ಅವರಿಗೆ ಅನುಕೂಲವಾಗಿದೆ. ಆದರೆ, ನಾನು ರಿಯಲ್ ಎಸ್ಟೇಟ್ ಮಾಡಿಲ್ಲ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ, ಉಪ ಮಹಾಪೌರರಾದ ಡಾ.ಡಿ.ರೂಪಾ,ವುಮೆನ್ ಕ್ಯಾನ್ ಫೌಂಡೇಶನ್ ರಚನಾ ಮಹೇಶ್, ಆರ್-ಪೆÇ್ರಸೆಸ್ ಔಟ್ ಸೋರ್ಸಿಂಗ್ ಸರ್ವೀಸ್ ಪ್ರೈ.ಲಿ. ಅಧ್ಯಕ್ಷರಾದ ಸವಿತಾ ಮಲ್ಲಪ್ಪ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೇ ಶ್ರೀನಿವಾಸ್‍ಗೌಡ, ಎಂಸಿಸಿಐ ಅಧ್ಯಕ್ಷ ಕೆ.ಬಿ.ಲಿಂಗರಾಜು, ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾರಾಯಣ ಮೂರ್ತಿ,ಡಿಐಸಿ ಜಂಟಿ ನಿರ್ದೇಶಕ ಟಿ.ದಿನೇಶ್, ರೂಡ್‍ಸೆಟ್ ನಿರ್ದೇಶಕ ಆನಂದ್, ಎಚ್.ರಾಮಕೃಷ್ಣೇಗೌಡ, ಪಿ.ದಿನೇಶ್ ಇನ್ನಿತರರು ಉಪಸ್ಥಿತರಿದ್ದರು.