ಚೊಚ್ಚಲ ಪಂದ್ಯದಲ್ಲೇ ಅಯ್ಯರ್ ಶತಕ

ಕಾನ್ಪುರ,ನ.೨೬- ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಪಂದ್ಯದ ಪ್ರಥಮ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ೩೪೫ ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿದೆ.
ನಿನ್ನೆ ೨೫೮ ರನ್‌ಗಳಿಗೆ ೪ ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ೨ನೇ ದಿನದ ಆಟ ಮುಂದುವರೆಸಿತು.
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಅದ್ಭುತ ಶತಕ ಬಾರಿಸಿದ್ದಾರೆ. ಈ ಮೂಲಕ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ೧೬ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಉತ್ತಮ ಆಟ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್‌ಗೆ ಭಾರತ ಕ್ರಿಕೆಟ್ ತಂಡ ಅಭಿನಂದನೆ ಸಲ್ಲಿಸಿದೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಶ್ರೇಯಸ್ ಅಯ್ಯರ್, ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ನಿನ್ನೆ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ೧೦೬ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಶ್ರೇಯಸ್ ಅಯ್ಯರ್, ನಾಯಕ ರಹಾನೆ ಜತೆ ೩೯ ರನ್ ಸೇರಿಸಿದರು.
ಬಳಿಕ ಜಡೇಜಾ ಅವರ ಜತೆ ಸೇರಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಈ ಜೋಡಿ ೫ನೇ ವಿಕೆಟ್‌ಗೆ ೧೧೩ ರನ್ ಸೇರಿಸಿದ್ದರು. ಇಂದು ಭಾರತ ೨ನೇ ದಿನದ ಆಟವನ್ನು ಮುಂದುವರೆಸಿ ಅಯ್ಯರ್ ಶತಕ ಸಿಡಿಸಿದರು. ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದಾರೆ. ೧೬೭ ಎಸೆತಗಳಲ್ಲಿ ೧೩ ಬೌಂಡರಿ, ೨ ಸಿಕ್ಸರ್ ಬಾರಿಸಿ ೧೦೪ ರನ್ ಗಳಿಸಿ ಔಟಾದರು.
ರವೀಂದ್ರ ಜಡೇಜಾ ೫೦ ರನ್ ಗಳಿಸಿ ಔಟಾದರು. ಆರ್. ಅಶ್ವಿನ್ ೩೮, ಅಕ್ಷರ್ ಪಟೇಲ್ ೩ ರನ್ ಗಳಿಸಿದರೆ, ಇಶಾಂತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಉಮೇಶ್ ಯಾದವ್ ೧೦ ರನ್ ಗಳಿಸಿ ಔಟಾಗದೆ ಉಳಿದರು. ನ್ಯೂಜಿಲೆಂಡ್ ಪರ ಟಿಮ್‌ಸೌದಿ ೫, ಜಾಮಿಸನ್ ೩ ಹಾಗೂ ಅಜಾಜ್ ಪಟೇಲ್ ೨ ವಿಕೆಟ್ ಗಳಿಸಿದರು.