ಚೊಕ್ಕಹಳ್ಳಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

ಹೊಸಕೋಟೆ,ಆ.೧೩-ತಾಲೂಕಿನ ಕಸಬಾ ಹೋಬಳಿಯ ಚೊಕ್ಕಹಳ್ಳಿ ಗ್ರಾಪಂಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಗಾದಿ ಲಾಟರಿ ಮೂಲಕ ಒಲಿದಿದ್ದು, ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಮಧುಶ್ರೀ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಆಂಜಿನಪ್ಪ ಆಯ್ಕೆಯಾದರು.
ಚೊಕ್ಕಹಳ್ಳಿ ಗ್ರಾಪಂನಲ್ಲಿ ಒಟ್ಟು ೨೪ ಸದಸ್ಯರ ಬಲವನ್ನು ಹೊಂದಿದ್ದು, ೧೨ ಸದಸ್ಯರು ಬಿಜೆಪಿ ಬೆಂಬಲಿತರು, ೧೨ ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಧುಶ್ರಿ , ಕಾಂಗ್ರೆಸ್ ಬೆಂಬಲಿತ ಅಮೃತಾ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶೃತಿ, ಕಾಂಗ್ರೆಸ್ ಬೆಂಬಲಿತ ಆಂಜಿನಪ್ಪ ಅವರು ನಾಮಪತ್ರ ಸಲ್ಲಿಸಿದರು.
ಚುನಾವಣೆ ನಡೆದ ಸಂಧರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳು ತಲಾ ೧೨ ಮತಗಳನ್ನು ಪಡೆದ ಹಿನ್ನೆಲೆ ಲಾಟರಿ ಮೂಲಕ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಲಾಟರಿ ಎತ್ತುವ ಸಂಧರ್ಭದಲ್ಲಿ ಅಧ್ಯಕ್ಷ ಗಾದಿ ಬಿಜೆಪಿ ಬೆಂಬಲಿತ ಮಧುಶ್ರೀಗೆ ಒಲಿದರೆ, ಉಪಾಧ್ಯಕ್ಷ ಗಾದಿ ಕಾಂಗ್ರೆಸ್ ಬೆಂಬಲಿತ ಆಂಜಿನಪ್ಪಗೆ ಒಲಿದು ಬಂದಿದೆ ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಘೋಷಣೆ ಹೊರಡಿಸಿದರು.