ಚೊಂಬು ಹಿಡಿದು ಮೋದಿ ವಿರುದ್ಧ ಕೈ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯ ಸರ್ಕಾರಕ್ಕೆ ಚೊಂಬು ನೀಡಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಚೊಂಬನ್ನು ಪ್ರದರ್ಶಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು ಶಾಸಕ ರಿಜ್ವಾನ್ ಅರ್ಷದ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಬೆಂಗಳೂರು, ಏ.೨೦-ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಕೊಡುಗೆ ಶೂನ್ಯವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ನಾಡಿನ ಜನತೆಗೆ “ಚೊಂಬು” ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.ನಗರದಲ್ಲಿಂದು ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜವಾಲ ನೇತೃತ್ವದಲ್ಲಿ ಬೆಂಗಳೂರಿನ ಹೆಬ್ಬಾಳ ವೇಲು ಸೇತುವೆಯ ಮೇಖ್ರಿ ಸರ್ಕಲ್ ನಲ್ಲಿ ಚೊಂಬು ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜವಾಲ,ಬರ ಪರಿಹಾರ ವಿಚಾರದಲ್ಲಿ ೧೮ ಸಾವಿರ ಕೋಟಿ, ೧೫ನೇ ಹಣಕಾಸು ಆಯೋಗದಿಂದ ನೀಡಬೇಕಿದ್ದ ೬೨ ಸಾವಿರ ಕೋಟಿ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು ನೀಡಿದ್ದಾರೆ ಎಂದು ಟೀಕಿಸಿದರು.ಎಲ್ಲರ ಖಾತೆಗೆ ೧೫ ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿ ಹಾಕಿದ್ದು ಮಾತ್ರ ಚೊಂಬು, ನಾವು ಕಟ್ಟುವ ಪ್ರತಿ ೧೦೦ ರೂ. ತೆರಿಗೆಲಿ ೧೩ ರೂ. ಮಾತ್ರ ವಾಪಸ್ ನೀಡುವ ಮೂಲಕ ಚೊಂಬು.ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ೨೭ ಜನ ಲೋಕಸಭಾ ಸದಸ್ಯರು ರಾಜ್ಯಕ್ಕೆ ನೀಡಿದ್ದು ಚೊಂಬು ಹೀಗೆ ಇಷ್ಟೆಲ್ಲಾ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ೬.೫ಕೋಟಿ ಕನ್ನಡಿಗರ ಸಹ ಅದೇ ಚೊಂಬನ್ನು ನೀಡಿ ಮನೆಗೆ ಕಳುಹಿಸಿಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಮೋದಿಯವರು ಕರ್ನಾಟಕಕ್ಕೆ ಚೊಂಬನ್ನ ಕೊಟ್ಟಿದ್ದಾರೆ. ರಾಜ್ಯದ ನೀರಾವರಿ, ಅಭಿವೃದ್ಧಿ, ಅನುದಾನ ತಾರತಮ್ಯ ವಿಚಾರವಾಗಿ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಮೊದಲು ಉತ್ತರಿಸಲಿ ಎಂದ ಅವರು, ಬಿಜೆಪಿ ಸಂಸದರೂ ಕಳೆದ ಹತ್ತು ವರ್ಷಗಳಿಂದ ರಾಜ್ಯಕ್ಕೆ ಅನ್ಯಾಯ ಎಸೆಗಿದ್ದಾರೆ ಎಂದು ಕಿಡಿಕಾರಿದರು.ಜನರು ಈ ಬೆಲೆ ವಿರುದ್ಧ ಈ ಚುನಾವಣೆಯಲ್ಲಿ ತೀರ್ಮಾನಿಸಬೇಕು. ಬಿಜೆಪಿ ಸೋಲಿಸಿ, ಬೆಲೆಯೇರಿಕೆ ನಿಲ್ಲಿಸಬೇಕು. ಕಾಂಗ್ರೆಸ್‌ಗೆ ನಿಮ್ಮ ಮತ ನೀಡುವಂತೆ ಪಕ್ಷವು ಮನವಿ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಜನರಿಗೆ ಆರ್ಥಿಕ ಹೊರೆ ನೀಡಿದೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಶಾಸಕ ರಿಜ್ವಾನ್ ಆರ್ಷದ್, ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಗುಂದ್, ಬಿ.ಆರ್ ನಾಯ್ಡು, ಕೆಪಿಸಿಸಿ ಉಪಾಧ್ಯಕ್ಷ ಎಸ್ ಈ ಸುದೀಂಧ್ರ, ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹೆಚ್.ಎಸ್ ಮಂಜುನಾಥ್ ಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯ ಸರ್ಕಾರಕ್ಕೆ ಚೊಂಬು ನೀಡಿರುವುದನ್ನು ಖಂಡಿಸಿ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರ ನೇತೃತ್ವದಲ್ಲಿಂದು ಲಾಲ್‌ಬಾಗ್ ಬಳಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಜೆ. ಹುಚ್ಚಪ್ಪ, ಆಡುಗೋಡಿ ಮೋಹನ್, ಮತ್ತಿತರರು ಭಾಗವಹಿಸಿದ್ದರು.

ಎಲ್ಲೆಡೆ ಚೂಂಬು ಹಿಡಿದು ಪ್ರತಿಭಟನೆ.!

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಹಿಡಿದು ಧರಣಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.