ಚೈನ್ ಲಿಂಕ್ ದಂಧೆ : ನೂರಾರು ಜನರಿಗೆ ವಂಚನೆ – ತಡೆಯಲು ಆಗ್ರಹ

ರಾಯಚೂರು.ಜು.೨೮- ಚೈನ್ ಲಿಂಕ್ ದಂಧೆಯ ಮೂಲಕ ಜನ ಸಾಮಾನ್ಯರಿಗೆ ಟ್ರಿಲಿಯನ್ ಮೈಂಡ್ಸ್ ವರ್ಡ್ ವೆಂಚರ್ ಪ್ರೈ.ಲಿ. ಕಂಪನಿ ವಂಚಿಸುತ್ತಿದೆಂದು ಗೀತಾ ಅವರು ಆರೋಪಿಸಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಕುರಿತು ಸಿಂಧನೂರಿನ ಠಾಣೆಯಲ್ಲಿ ಕಂಪನಿಯ ವ್ಯವಸ್ಥಾಪಕರಾದ ಸಂದೇಶಕುಮಾರ ಶೆಟ್ಟಿ, ಟೀಮ್ ಲೀಡರ್ ವೆಂಕಪ್ಪ ಲಂಬಾಣಿ ಹಾಗೂ ಮೃತ್ಯುಂಜಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾನು ಶಿಕ್ಷಕಿಯಾಗಿ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಟ್ರಿಲಿಯನ್ ಮೈಂಡ್ಸ್ ವರ್ಡ್ ವೆಂಚರ್ ಪ್ರೈ.ಲಿ. ಕಂಪನಿಯಲ್ಲಿ ವ್ಯವಹಾರ ನಡೆಸಿದರೆ, ಹಣದೊಂದಿಗೆ ಲ್ಯಾಪ್ ಟಾಪ್, ಬೈಕ್, ಕಾರು ಕೊಡುವುದಾಗಿ ನಂಬಿಸಿ, ಮೋಸ ಮಾಡಲಾಗುತ್ತಿದೆ. ನಾನು ೪೦೦ ಸದಸ್ಯರನ್ನು ಈ ಕಂಪನಿಗೆ ಮಾಡಿದ್ದೇನೆ. ನನ್ನ ಚೈನ್ ಲಿಂಕ್‌ನಲ್ಲಿ ೧೩೦೦ ಜನ ವ್ಯವಹಾರದಲ್ಲಿದ್ದಾರೆ.
ಪ್ರತಿಯೊಬ್ಬರು ೮೯೯೦ ರೂ. ಹಣ ಪಾವತಿಸಿದ್ದಾರೆ. ಕಂಪನಿ ನೀಡುವ ಭರವಸೆಯಂತೆ ನಮಗೆ ಯಾವುದೇ ಸೌಲಭ್ಯ ನೀಡುವುದಿಲ್ಲ. ನನಗೆ ಕಾರು ಖರೀದಿಗೆ ಅವಕಾಶ ಬಂದಿದೆಂದು ಹೇಳಿದ ಕಂಪನಿಯೂ ಇಲ್ಲಿವರೆಗೂ ಇಂತಹ ಯಾವುದೇ ಸೌಲಭ್ಯ ನನಗೆ ನೀಡಿಲ್ಲ. ಚೈನ್ ಲಿಂಕ್ ವ್ಯವಹಾರದಲ್ಲಿ ತೊಡಗಿದ ಜನರಿಗೆ ಯಾವುದೇ ಲಾಭವನ್ನು ನೀಡದಿರುವುದು ಕಂಪನಿಯ ವಂಚನೆಗೆ ನಿದರ್ಶನವಾಗಿದೆ. ನಾನು ಇದನ್ನು ಪ್ರಶ್ನಿಸಿದ್ದೇನೆ ಎನ್ನುವ ಕಾರಣಕ್ಕೆ ನನ್ನನ್ನು ಕಂಪನಿಯಿಂದ ಬ್ಲಾಕ್ ಮಾಡಲಾಗಿದೆ.
ಈ ಕಂಪನಿಯ ವಿರುದ್ಧ ೨೦೨೧ ರಲ್ಲಿ ಪ್ರಕರಣಗಳು ದಾಖಲಾಗಿವೆ. ನನಗೆ ಅವರು ನೀಡಿದ ಭರವಸೆಗಳ ಸಂಪೂರ್ಣ ದಾಖಲೆಗಳು ನನ್ನಲ್ಲಿವೆ. ಸಂದೇಶ ಕುಮಾರ ಸೇರಿದಂತೆ ಇನ್ನಿತರರು ಜನರಿಗೆ ವಂಚಿಸುತ್ತಿದ್ದಾರೆ. ಅಲ್ಲದೆ, ಕೋಟ್ಯಾಂತರ ರೂ. ಲೂಟಿ ಮಾಡುತ್ತಿದ್ದಾರೆ. ಸಿಂಧನೂರಿನಲ್ಲಿ ಈ ಕುರಿತು ಪ್ರಕರಣ ದಾಖಲಿಸಲು ಪೊಲೀಸರು ತುರ್ತು ಕ್ರಮ ಕೈಗೊಂಡಿಲ್ಲ. ಎಸ್ಪಿ ಅವರ ಗಮನಕ್ಕೆ ತಂದ ನಂತರ ಈಗ ಪ್ರಕರಣ ದಾಖಲಿಸಲಾಗಿದೆ. ಆದರೆ, ಇಲ್ಲಿವರೆಗೂ ಯಾರನ್ನು ಬಂಧಿಸಿಲ್ಲ. ಜನರನ್ನು ವಂಚಿಸುತ್ತಿರುವ ಇವರ ವಿರುದ್ಧ ಕಠಿಣ ಕ್ರಮ ಕೈಗೊಂಡು ತಮ್ಮಂತೆ ಹೆಚ್ಚಿನ ಜನರು ವಂಚನೆಗೊಳಗಾಗದಂತೆ ತಡೆಯಲು ಅವರು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ಇವರ ಈ ಜಾಲ ನಡೆಯುತ್ತಿದೆಂದು ಹೇಳಿದರು.