ಚೈತ್ರಾ ವಂಚನೆ- ಭಾಷಣ ಥಳುಕು ಬೇಡ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೧೪:ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಚೈತ್ರಾ ಕುಂದಾಪುರ ಅವರ ಹಿಂದೂ ಪರ ಭಾಷಣಕ್ಕೂ ವಂಚನೆ ಪ್ರಕರಣಕ್ಕೂ ಥಳಕು ಹಾಕುವುದು ಬೇಡ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ೩.೫ ಕೋಟಿ ರೂ. ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಬಂಧನವಾಗಿದೆ. ದೂರಿನ ಆಧಾರದ ಮೇಲೆ ಈ ಬಂಧನ ನಡೆದಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಲ್ಲ ಎಂದ ಸ್ಪಷ್ಟಪಡಿಸಿದರು.
ಈ ಪ್ರಕರಣದಲ್ಲಿ ಸ್ವಾಮೀಜಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಭಾಗಿಯಾಗಿದ್ದರೆ ಅವರ ಬಂಧನವೂ ಆಗುತ್ತದೆ. ಯಾರೇ ತಪ್ಪು ಮಾಡಿದರೂ ಕಾನೂನಿನಡಿ ಕ್ರಮ ಆಗಲಿದೆ ಎಂದರು. ಚೈತ್ರಾ ಕುಂದಾಪುರ ಅವರ ಹಿಂದೂ ಪರ ಭಾಷಣವನ್ನು ಈ ಪ್ರಕರಣಕ್ಕೆ ಮಿಕ್ಸಪ್ ಮಾಡುವುದು ಬೇಡ ಎಂದರು.
ಜಾರಕಿಹೊಳಿ ಹೇಳಿಕೆ
ಈ ಪ್ರಕರಣದ ಬಗ್ಗೆ ಮಾತನಾಡಿರುವ ಸಚಿವ ಸತೀಶ್‌ಜಾರಕಿಹೊಳಿ ಸಹ ಚೈತ್ರಾ ಅವರ ಬಂಧನಕ್ಕೂ ಹಿಂದೂ ಸಂಘಟನೆಗೂ ಥಳಕು ಹಾಕುವುದು ಸರಿಯಲ್ಲ, ಚೈತ್ರಾ ಅವರ ಹಿಂದೂ ಪರ ಭಾಷಣ ನಾನು ಕೇಳಿದ್ದೇನೆ. ಆದರೆ, ಈ ವಿಚಾರವನ್ನು ಸಂಘಟನೆಗೆ ಸೇರಿಸುವುದು ಸರಿಯಲ್ಲ. ಇದೊಂದು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸುವುದೇ ಸರಿ ಎಂದರು.