
ಬೆಂಗಳೂರು,ಸೆ.೧೪-ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ ನಡೆಸಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಗ್ಯಾಂಗ್ ನ ಕಿಂಗ್ ಪಿನ್ ಫೈರ್ ಬ್ರಾಂಡ್ ಖ್ಯಾತಿಯ ಉಗ್ರ ಭಾಷಣಕಾರ್ತಿ ಚೈತ್ರಾ ಕುಂದಾಪುರ ವಿಚಾರಣೆಯಲ್ಲಿ ವಿಧಾನಸಭಾ ಟಿಕೆಟ್ ವಂಚನಾ ಜಾಲದ ಹಿಂದೆ ದೊಡ್ಡ ದೊಡ್ಡ ನಾಯಕನಿರುವ ಆಘಾತಕಾರಿ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.ಉಡುಪಿಯ ಕೃಷ್ಣಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ಚೈತ್ರಾ ಕುಂದಾಪುರ ಅವರನ್ನು ನಿನ್ನೆ ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ೧೦ ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರದಲ್ಲಿಸಿ ಸಿಸಿಬಿ ಕಚೇರಿಗೆ ಕರೆತಂದು ತೀವ್ರ ವಿಚಾರಣೆ ನಡೆಸಿದ್ದಾರೆ.ಸ್ವಾಮೀಜಿ ಸಿಕ್ಕಾಕಿಕೊಳ್ಳಿ, ಎಲ್ಲ ಸತ್ಯ ಹೊರಗಡೆ ಬರುತ್ತೆ, ದೊಡ್ಡ ದೊಡ್ಡವರ ಹೆಸರೆಲ್ಲ ಹೊರಗಡೆ ಬರುತ್ತದೆ. ನಾನು ಮೊದಲ ಆರೋಪಿಯಾಗಿರಬಹುದು. ಆದರೆ ಸತ್ಯ ಹೊರಗೆ ಬರುತ್ತದೆ ಎಂದು ಆಕೆ ಸಿಸಿಬಿ ಕಸ್ಟಡಿಯಲ್ಲಿರುವ ಸಂದರ್ಭದಲ್ಲೇ ಬಹಿರಂಗ ಪಡಿಸಿದ್ದಾರೆ.ಚೈತ್ರಾ ಕುಂದಾಪುರ ಅವರು ಸ್ವಾಮೀಜಿ ಎಂದು ಉಲ್ಲೇಖ ಮಾಡುತ್ತಿರುವುದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅವರು ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ.ಅಭಿನವ ಹಾಲಶ್ರೀ ಸ್ವಾಮೀಜಿ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಮೂರನೇಯವರಾಗಿದ್ದಾರೆ, ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ ೧.೫ ಕೋಟಿ ರೂಗಳನ್ನು ಪಡೆದಿದ್ದಾರೆ.ಬೈಂದೂರು ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳಿದ ಗೋವಿಂದ ಪೂಜಾರಿ ಅವರನ್ನು ಚೈತ್ರಾ ಕುಂದಾಪುರ ಮತ್ತವರ ಗ್ಯಾಂಗ್ ಹೂವಿನ ಹಡಗಲಿಯ ಮಠಕ್ಕೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಲಾಗಿದೆ.ಅಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿರುವ ಸ್ವಾಮೀಜಿ ೧.೫ ಕೋಟಿ ರೂ. ಕೊಡಬೇಕು ಎಂದು ಕೇಳಿದ್ದಾರೆ ಮತ್ತು ಅದನ್ನು ಜಯನಗರದಲ್ಲಿರುವ ಕಚೇರಿಗೆ ಕೊಂಡೊಯ್ದು ಒಪ್ಪಿಸಲಾಗಿದೆ. ಈ ವಿಚಾರವನ್ನು ಗೋವಿಂದ ಪೂಜಾರಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಏನಿದೆ?
೨೦೨೨ರ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವನಾಥ್ ಜೀ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕಾಲ್ ಮಾಡಿ, ಕರ್ನಾಟಕದ ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಿ ಎಂಬ ಸಲಹೆಯನ್ನು ಗೋವಿಂದ ಪೂಜಾರಿಗೆ ನೀಡಲಾಗುತ್ತದೆ.ಗೋವಿಂದ ಪೂಜಾರಿ ಅವರು ಬೆಂಗಳೂರಿನಿಂದ ಹೊಸಪೇಟೆಗೆ ಹೋಗಿ ಅಭಿನವ ಹಾಲಶ್ರೀ ಸ್ವಾಮೀಜಿಯ ಮುಂದೆ ಕುಕ್ಕರುಗಾಲಲ್ಲಿ ಕೂರುತ್ತಾರೆ. ಆಗ ಸ್ವಾಮೀಜಿಯವರು, ಗೋವಿಂದ ಪೂಜಾರಿಯವರೇ ವಿಶ್ವನಾಥಜೀ ಅವರು ಎಲ್ಲ ವಿಷಯ ತಿಳಿಸಿದ್ದಾರೆ. ಅವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಟ್ಟಿದ್ದು. ನನಗೆ ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದೆ. ಖಂಡಿತ ಟಿಕೆಟ್ ಕೊಡಿಸೋಣ. ಆದರೆ, ಮುಂದಿನ ಪ್ರಕ್ರಿಯೆಯಾಗಿ೧.೫ ಕೋಟಿ ರೂ ಬೇಕಾಗುತ್ತದೆ ಎಂದರು.ಗೋವಿಂದ ಪೂಜಾರಿ ಅವರು ಸ್ವಲ್ಪ ಕಾಲಾವಕಾಶ ಕೇಳುತ್ತಾರೆ. ಕೊನೆಗೆ ೨೦೨೩ರ ಜ. ೧೬ರಂದು ಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ೧.೫ ಕೋಟಿ ರೂ.ಯನ್ನು ನೀಡುತ್ತಾರೆ ಗೋವಿಂದ ಪೂಜಾರಿ. ಟಿಕೆಟ್ ಸಿಗದಿದ್ದರೆ ಹಣ ವಾಪಸ್ ಎಂಬ ಭರವಸೆಯನ್ನು ಸ್ವಾಮೀಜಿ ಕೂಡಾ ನೀಡುತ್ತಾರೆ.
ಈ ನಡುವೆ, ಟಿಕೆಟ್ ಸಿಗದೆ ಇದ್ದಾಗ ಸಿಟ್ಟುಗೊಂಡ ಗೋವಿಂದ ಪೂಜಾರಿ ಅವರು ದೂರು ಕೊಡಲು ಮುಂದಾದಾಗ ಸ್ವಾಮೀಜಿ ನಾನು ನಿಮ್ಮ ಹಣವನ್ನು ವಾಪಸ್ ಕೊಡುತ್ತೇನೆ. ಈ ಕೇಸಿನಲ್ಲಿ ನನ್ನನ್ನು ಬಿಟ್ಟುಬಿಡಿ ಎನ್ನುತ್ತಾರೆ!
ಚೈತ್ರಾ ಹೇಳಿಕೆಯ ಹಿಂದೆ:
ಇದೀಗ ಚೈತ್ರಾ ಕುಂದಾಪುರ ಅವರ ಸ್ವಾಮೀಜಿಯ ವಿಚಾರಣೆ ನಡೆದರೆ ದೊಡ್ಡ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿರುವುದರ ಹಿಂದೆ ಏನಿದೆ ಎಂದು ಗಮನಿಸಿದರೆ, ಒಂದೊಮ್ಮೆ ಸ್ವಾಮೀಜಿ ಬಂಧನವಾದರೆ ಅವರ ಜತೆ ಸಂಪರ್ಕದಲ್ಲಿರುವ ನಾಯಕರ ಬಣ್ಣವೂ ಬಯಲಾಗಲಿದೆ.
ವಂಚನಾ ಜಾಲದಲ್ಲಿರುವ ಅಧಿಕೃತ ಮತ್ತು ನಿಜವಾದ ಪಾತ್ರ ಸ್ವಾಮೀಜಿ ಅವರದು ಮಾತ್ರ. ಉಳಿದುದೆಲ್ಲವೂ ಹಣಕ್ಕಾಗಿ ಮಾಡಿದ ಪಾತ್ರಗಳು. ಟಿಕೆಟ್ ಬಗ್ಗೆ ಬಿಜೆಪಿ ವಲಯದ ಜತೆಗೆ ಸಂಪರ್ಕ ಇರುವ ವ್ಯಕ್ತಿ ಎಂಬ ನೆಲೆಯಲ್ಲಿ ಮಾತುಕತೆ ನಡೆದಿರುವುದು ಸ್ವಾಮೀಜಿ ಜತೆಗೆ ಮಾತ್ರ.
ಸ್ವಾಮೀಜಿಯವರು ಹಲವಾರು ನಾಯಕರ ಜತೆ ನಿಕಟ ಸಂಪರ್ಕ ಹೊಂದಿರುವುದು, ಮಾತುಕತೆ ವೇಳೆ ತನಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ಜತೆ ಒಡನಾಟವಿದೆ ಎಂದು ಹೇಳಿರುವುದು ಹಾಗೂ ಈ ಟಿಕೆಟ್‌ಗಾಗಿ ಒಂದುವರೆ ಕೋಟಿ ಕೊಡಬೇಕು ಎಂದು ಕೇಳಿರುವುದು ಸಂಶಯಗಳಿಗೆ ಕಾರಣವಾಗಿದೆ.
ಸ್ವಾಮೀಜಿ ಸೆರೆಗೆ ಶೋಧ:
ಈ ಪ್ರಕರಣದಲ್ಲಿ ಇದುವರೆಗೂ ಹಾಲಶ್ರೀ ಸ್ವಾಮೀಜಿ ಬಂಧನ ಆಗಿಲ್ಲ. ಅವರು ಸಿಸಿಬಿ ವಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ.
ಹಾಗಿದ್ದರೆ ಹಿಂದು ಸಂಘಟನೆಗಳನ್ನು ಬೆಂಬಲಿಸುವುದರಲ್ಲಿ ಮುಂಚೂಣಿಯಲ್ಲಿದ್ದ ಸ್ವಾಮೀಜಿ, ರಾಜಕಾರಣಿಗಳ ಜತೆ ನಿಕಟ ಸಂಪರ್ಕದಲ್ಲಿರುವ ಮಾಹಿತಿಯಿದ್ದು,
ಚೈತ್ರಾ ಕುಂದಾಪುರ ಅವರ ಜೊತೆಗೆ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಮೊಬೈಲ್ ಪರಿಶೀಲನೆ:
ಈಗಾಗಲೇ ಬಂಧಿತರ ಎಲ್ಲಾ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಯಾರೆಲ್ಲ ವಂಚನೆಯಲ್ಲಿ ಇವರ ಜೊತೆ ಭಾಗಿಯಾಗಿದ್ದಾರೆ, ಜೊತೆಗೆ ಎಷ್ಟು ದಿನದಿಂದ ಕೃತ್ಯ ಎಸಗುತ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಎಲ್ಲಾ ಆರೋಪಿಗಳ ಮೊಬೈಲ್ ಕಾಲ್ ಲಿಸ್ಟ್ ಪಡೆಯಲಾಗುತ್ತಿದೆ.ಪ್ತಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಚಾಟಿಂಗ್ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಕೋರ್ಟ್ ಅನುಮತಿ ಪಡೆದು ಮೊಬೈಲ್ ರಿಟ್ರೀವ್ ಮಾಡಿಸಲು ತೀರ್ಮಾನಿಸಲಾಗಿದೆ.
ಒಪ್ಪಿಕೊಂಡ ಪ್ರಸಾದ್ :
ವಿಚಾರಣೆ ವೇಳೆ ನಾನು ಹಣ ಪಡೆದಿಲ್ಲವೆಂದು ಚೈತ್ರಾ ಕುಂದಾಪುರ ವಾದ ಮುಂದುವರಿಸಿದ್ದರೂ, ವಂಚನೆಯಲ್ಲಿ ಚೈತ್ರಾ ಸಹಚರರಾಗಿದ್ದವರು ಸಿಸಿಬಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ. ಚೈತ್ರಾ ಕುಂದಾಪುರಗೆ ಗೋವಿಂದ ಪೂಜಾರಿಯನ್ನು ಪರಿಚಯ ಮಾಡಿಸಿದ್ದೆ ಎಂದು ಸಿಸಿಬಿ ಅಧಿಕಾರಿಗಳ ಎದುರು ಪ್ರಸಾದ್ ಒಪ್ಪಿಕೊಂಡಿದ್ದಾನೆ. ಇತ್ತ ಶಿವವೊಗ್ಗ ಆರ್‌ಎಸ್‌ಎಸ್ ಕಚೇರಿ ಎದುರು ೫೦ ಲಕ್ಷ ರೂ. ಹಣ ಪಡೆದಿರುವ ಬಗ್ಗೆ ಗಗನ್ ಕಡೂರು ಒಪ್ಪಿಕೊಂಡಿದ್ದು, ೫೦ ಲಕ್ಷದಲ್ಲಿ ಚೈತ್ರಾಗೆ ಅರ್ಧ ಹಣ ನೀಡಿರುವ ಬಗ್ಗೆ ತಿಳಿಸಿದ್ದಾನೆ.
ದೂರು ನೀಡಲು ಮನವಿ:
ಗೋವಿಂದ ಪೂಜಾರಿ ಮಾತ್ರವಲ್ಲದೆ ಮತ್ತಷ್ಟು ಜನರಿಗೆ ಚೈತ್ರಾ ಹೀಗೆ ಮೋಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹೆಸರಲ್ಲಿ ಮತ್ತಷ್ಟು ಜನರಿಗೆ ಮೋಸ ಮಾಡಿರಬಹುದು ಎಂಬ ಆಯಾಮದಲ್ಲಿ ಸಿಸಿಬಿ ಪೊಲೀಸರಿಂದ ತನಿಖೆ ನಡೆದಿದೆ. ಮೋಸ ಹೋಗಿದ್ದರೆ ಬಂದು ದೂರು ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದಾರೆ.