ಚೆಸ್ ವಿಶ್ವಕಪ್: ಫೈನಲ್‌ಗೆ ಪ್ರಗ್ನಾನಂದ

ನವದೆಹಲಿ,ಆ.೨೨- ಭಾರತದ ಭರವಸೆಯ ಯುವ ಚೆಸ್ ಆಟಗಾರ ಆರ್.ಪ್ರಗ್ನಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ಗೆ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೆಮಿಫೈನಲ್‌ನಲ್ಲಿ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ.
ಈ ಮೂಲಕ ಆರ್. ಪ್ರಗ್ನಾನಂದ ಅವರು ಟೈ ಬ್ರೇಕರ್ ಮೂಲಕ ವಿಶ್ವ ನಂ. ೩ರ ಶ್ರೇಯಾಂಕ ಹೊಂದಿರುವ ಫ್ಯಾಬಿಯಾನೊ ಕರುವಾನಾ ಅವರನ್ನು ೩.೫-೨.೫ ಅಂಕದಿಂದ ಪರಾಭವಗಳಿಸಿದ್ದಾರೆ.ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಆರ್. ಪ್ರಗ್ನಾನಂದ ಎದುರಿಸಲಿದ್ದಾರೆ.ಇದಕ್ಕೂ ಮೊದಲು ಎರಡು-ಆಟಗಳ ಕ್ಲಾಸಿಕಲ್ ಸರಣಿ ೧-೧ ಟೈನಲ್ಲಿ ಕೊನೆಗೊಂಡಿತು, ಮೊದಲು ಪ್ರಗ್ನಾನಂದ ಅವರು ಅಮೇರಿಕನ್ ಗ್ರ್ಯಾಂಡ್‌ಮಾಸ್ಟರ್ ಟೈ-ಬ್ರೇಕರ್‍ನಲ್ಲಿ ಸೋಲಿಸಲು ಸಾಕಷ್ಟು ಪ್ರಯತ್ನಪಟ್ಟರು. ೧೮ ವರ್ಷದ ಆರ್ ಪ್ರಗ್ನಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಮತ್ತು ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಪಡೆದ ದಂತಕಥೆ ಬಾಬಿ ಫಿಶರ್ ಮತ್ತು ಕಾರ್ಲ್‌ಸೆನ್ ನಂತರ ಮೂರನೇ ಕಿರಿಯ ಎನ್ನುವ ಶ್ರೇಯಕ್ಕೂ ಪಾತ್ರರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರ್.ಪ್ರಗ್ನಾನಂದ್ ಅವರು ಪಂದ್ಯಾವಳಿಯಲ್ಲಿ ಮ್ಯಾಗ್ನಸ್ ವಿರುದ್ದ ಫೈನಲ್ ಪಂದ್ಯ ಆಡುತ್ತೇನೆ ಎನ್ನುವ ನಿರೀಕ್ಷೆ ಇರಲಿಲ್ಲ. ಈಗ ಅದು ನನಸಾಗಿದೆ. ಫೈನಲ್ಸ್ ನಲ್ಲಿ ಇದುವರೆಗೆ ತೋರಿದ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡುವ ಕಡೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.”ಅಭ್ಯರ್ಥಿಗಳಿಗೆ ಅರ್ಹತೆ ಪಡೆಯುವುದು ನಿಜವಾಗಿಯೂ ಒಳ್ಳೆಯದು. ಫೈನಲ್ಸ್ ಗೆ ಬಂದಿರುವುದು ಖುಷಿಯಾಗಿದೆ.ಈ ಸ್ಥಾನಕ್ಕೆ ಬರಲು ಬಯಸಿದ್ದೆ” ಎಂದು ಸೆಮಿಫೈನಲ್‌ನಲ್ಲಿ ಗೆದ್ದ ನಂತರ ಅವರು ಈ ವಿಷಯ ತಿಳಿಸಿದ್ದಾರೆ.