ಚೆಸ್ ಒಲಂಪಿಯಾಡ್‌ಗೆ ಸಂಜೆ ಮೋದಿ ಚಾಲನೆ

ಚೆನ್ನೈ,ಜು.೨೮- ವಿಶ್ವದ ಅತಿ ದೊಡ್ಡ ಚೆಸ್ ಪಂದ್ಯಾವಳಿ ೪೪ನೇ ಚೆಸ್ ಒಲಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ವಿದ್ಯುಕ್ತ ಚಾಲನೆ ನೀಡಲಿದ್ದು, ಜಗತ್ತಿನ ೧೮೭ ದೇಶಗಳ ಒಟ್ಟು ೩೪೩ ತಂಡಗಳು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಮಾರ್ಗದರ್ಶನದಲ್ಲಿ ದೇಶದ ೨೫ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಆಗಸ್ಟ್ ೧೦ರ ತನಕ ಚೆನ್ನೈನಲ್ಲಿ ಪಂದ್ಯಾವಳಿ ನಡೆಯಲಿದೆ.

ಪ್ರತಿಷ್ಠಿತ ಕ್ರೀಡಾಕೂಟ ಉದ್ಘಾಟನೆಯ ವೇಳೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್, ಸೇರಿದಂತೆ ಸಿನಿಮಾ, ರಾಜಕೀಯ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ

ಚೆಸ್ ಒಲಂಪಿಯಾಡ್ ಹಿನ್ನೆಲೆಯಲ್ಲಿ ರಾಜಧಾನಿ ಚೆನ್ನೈನ ಪ್ರಮುಖ ಸೇತುವೆಗಳನ್ನು ಚೆಸ್ ಬೋರ್ಡ್‌ನಲ್ಲಿ ಚೌಕಗಳನ್ನು ಹೋಲುವಂತೆ ಕಪ್ಪು ಮತ್ತು ಬಿಳಿ ಬಣ್ಣವನ್ನು ಚಿತ್ರಿಸಲಾಗಿದ್ದು ಜಗತ್ತಿನ ಗಮನ ಸೆಳೆದಿದೆ.

ಪಂದ್ಯಾವಳಿಯಲ್ಲಿ ಏಳು ಮಹಿಳಾ ಗ್ರ್ಯಾಂಡ್‌ಮಾಸ್ಟರ್‍ಗಳು, ೩೪ ಅಂತರಾಷ್ಟ್ರೀಯ ಮಾಸ್ಟರ್‍ಗಳು, ೧೦,೦೦೦ ನೋಂದಾಯಿತ ಆಟಗಾರರನ್ನು ಹೊರತುಪಡಿಸಿ ಸಾವಿರಾರು ಮಂದಿ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಶೇಷ ಗೀತೆ ಬಿಡುಗಡೆ:

ಚೆಸ್ ಒಲಂಪಿಯಾಡ್ ಹಿನ್ನೆಲೆಯಲ್ಲಿ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇಪಿಯರ್ ಸೇತುವೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಗೀತೆ ಬಿಡುಗಡೆ ಮಾಡಲಾಗಿದ್ದು ಗಮನ ಸೆಳೆದಿದೆ.

ಚೆಸ್ ಬೋರ್ಡ್‌ನಲ್ಲಿ ಚೌಕಗಳನ್ನು ಹೋಲುವಂತೆ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದ್ದು ಬಿಳಿ ಬಟ್ಟೆ ಧರಿಸಿದ್ದು ಅವರ ಮಧ್ಯೆ ಕಪ್ಪು ಬಣ್ಣದ ಧಿರಿಸು ತೊಟ್ಟ ನರ್ತಕರು ಸುತ್ತುವರೆದ ವಿಡಿಯೋ ವೈರಲ್ ಆಗಿದೆ.
ಸಂತಸ

ಚೆನ್ನೈ ಚೆಸ್ ಪಂದ್ಯಾವಳಿಗೆ ಇಷ್ಟೊಂದು ಉತ್ಸುಕವಾಗಿರುವುದನ್ನು ಹಿಂದೆದೂ ನೋಡಿಲ್ಲ. ಸೇತುವೆಯನ್ನು ಕಪ್ಪು ಬಿಳುಪು ಬಣ್ಣ ಬಳಿದಿರುವುದನ್ನು ಕಂಡು ತುಂಬಾ ಸಂತೋಷವಾಗಿದೆ ಎಂದು ಮಾಜಿ ವಿಶ್ವ ಚಾಂಪಿಯನ್ ಚೆನ್ನೈನವರೇ ಆದ ವಿಶ್ವನಾಥನ್ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ.

ಚೆಸ್ ಒಲಿಂಪಿಯಾಡ್ ಬಗ್ಗೆ ನಗರದ ಪ್ರತಿಯೊಬ್ಬರೂ ತೋರುತ್ತಿರುವ ಪ್ರೀತಿ ಇನ್ನಷ್ಟು ಖುಷಿಕೊಟ್ಟಿದೆ ಎಂದಿದ್ದಾರೆ.