ಚೆಸ್ಕಾಂನ ಅಸಮರ್ಪಕ ಕಾರ್ಯವೈಖರಿ ವಿರೋಧಿಸಿ ಪ್ರತಿಭಟನೆ

ಕೆ.ಆರ್.ಪೇಟೆ:ಏ:01: ಚೆಸ್ಕಾಂನ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ತಾಲ್ಲೂಕಿನ ರೈತಸಮುದಾಯಕ್ಕೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು ಕೂಡಲೇ ಈ ಸಮಸ್ಯೆಗಳನ್ನು ಸರಿಪಡಿಸುವಂತೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಸ್ ವೇಣು ನೇತೃತ್ವದಲ್ಲಿ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸೆಸ್ಕಾಂ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ಕರವೇ ಕಾರ್ಯಕರ್ತರು ಅಸಮರ್ಪಕ ವಿದ್ಯುತ್ ನೀಡುವಿಕೆಯಿಂದ ಕೃಷಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ಅವುಗಳನ್ನು ಸರಿಪಡಿಸುವಂತೆ ಒತ್ತಾಯಿಸಿತು.
ಈ ಕುರಿತು ಮಾತನಾಡಿದ ರಕ್ಷಣಾವೇದಿಕೆ ಪದವೀಧರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ರೈತರು ಕರೆಂಟ್ ಕೇಳಿದರೆ ಲೋಡ್ ಶೆಡ್ಡಿಂಗ್ ನೆಪಹೇಳಿ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಹಾಗಾದರೆ ರೈತರು ಕರೆಂಟ್ ಕೇಳುವುದೇ ತಪ್ಪಾ, ಬೆಂಗಳೂರಿನ ಐಟಿಬಿಟಿ ಕಂಪನಿಗಳಿಗೆ ಇಲ್ಲದ ಲೋಡ್ ಶೆಡ್ಡಿಂಗ್ ರೈತರಿಗೆ ಮಾತ್ರ ಬೇಕಾ, ನಿಮ್ಮ ಬಳಿ ಕರೆಂಟ್ ಪಡೆಯಲು ಪ್ರತೀವರ್ಷ ರೈತರುಗಳು ಧರಣಿ, ಪ್ರತಿಭಟನೆ ಕೂರಬೇಕಾ, ರೈತ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ 10-15 ದಿನಗಳು ನೀರು ಇಲ್ಲ ಎಂದರೆ ಅವುಗಳ ಗತಿ ಏನು ?.
ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತರುಗಳು ನಷ್ಟ ಅನುಭವಿಸುತ್ತಿದ್ದು ಇದರಿಂದಾಗಿ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಟಿಸಿ ಸುಟ್ಟುಹೋದರೆ ರೈತನೇ ಆ ಟಿಸಿ ಯನ್ನು ಇಳಿಸÀಬೇಕು, ಹಗ್ಗ ರಾಟೆ ತರಬೇಕು, ರಿಪೇರಿ ಮಾಡಿಸಬೇಕು, ಮತ್ತೆ ಅದನ್ನು ಏರಿಸಬೇಕು ಈ ಎಲ್ಲಾ ಕೆಲಸಗಳನ್ನು ರೈತರೇ ಮಾಡುವುದಾದರೆ ನಿಮ್ಮ ಇಲಾಖೆ ಏಕೆ ಬೇಕು. ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಿ ನೀವೆಲ್ಲರೂ ರೈತರ ಮಕ್ಕಳು ಎಂಬುದನ್ನು ಮರೆಯಬಾರದು
ರೈತರ ಪಂಪ್ ಸೆಟ್ಟುಗಳಿಗೆ ವಿದ್ಯುತ್ ನೀಡುವ ಅವಧಿಯಲ್ಲಿಯೇ ಕಾಮಗಾರಿ ಕೈಗೆತ್ತಿಕೊಂಡು ರೈತರಿಗೆ ಸಮರ್ಪಕ ವಿದ್ಯುತ್ ದೊರಕದಂತೆ ಮಾಡುತ್ತಿದ್ದಾರೆ. ಗುತ್ತಿಗೆದಾರನ ಮುಲಾಜಿಗೆ ಅನುಗುಣವಾಗಿ ವಿದ್ಯುತ್ ತೆಗೆಯುವುದನ್ನು ನಿಲ್ಲಿಸಿ ಇಲಾಖೆಯ ನಿಯಮಾವಳಿ ಪ್ರಕಾರ ರೈತರಿಗೆ ವಿದ್ಯುತ್ ನೀಡಬೇಕು. ಹಗಲು ನೀಡಬೇಕಾದ ನಿರಂತರ 7 ಘಂಟೆಗಳ ವಿದ್ಯುತ್‍ತನ್ನು ರಾತ್ರಿ ವೇಳೆ ನೀಡುತ್ತಿದೆ. ಇದನ್ನು ಬದಲಿಸಿ ಹಗಲಿನ ವೇಳೆ ನಿರಂತರವಾಗಿ ವಿದ್ಯುತ್ ನೀಡಬೇಕು.
ಟಿ.ಸಿ ಅಳವಡಿಕೆಯಲ್ಲಿ ಭ್ರಷ್ಟಾಚಾರ: ನೂತನ ಮಾಹಿತಿಯಂತೆ ಟಿ.ಸಿ ಇಲಾಖೆಯ ಆಸ್ತಿ. ಕೃಷಿ ಉದ್ದೇಶಿತ ಟಿ.ಸಿ ಸುಟ್ಟುಹೋದರೆ 72 ಘಂಟೆಗಳಲ್ಲಿ, ಕುಡಿಯುವ ನೀರು ಯೋಜನೆಯ ಟಿ.ಸಿ ಸುಟ್ಟು ಹೋದರೆ 24 ಘಂಟೆಗಳಲ್ಲಿ ರಿಪೇರಿ ಮಾಡಿಸಿ ಅಥವಾ ಹೊಸ ಟಿ.ಸಿ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸುಟ್ಟು ಹೋದ ಇಲಾಖೆಯ ಟಿ.ಸಿಗಳನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಂದ ರಿಪೇರಿ ಮಾಡಿಸಬಾರದು. ಆದರೆ ತಾಲೂಕಿನಲ್ಲಿ ಸುಟ್ಟು ಹೋದ ಟಿ.ಸಿ ಗಳನ್ನು ರೈತರೇ ಬಿಚ್ಚುಕೊಂಡು ಹೋಗಿ ಖಾಸಗಿಯವರ ಬಳಿ ರಿಪೇರಿ ಮಾಡಿಸುವಂತೆ ಸೆಸ್ಕಾಂ ಎಂಜಿನಿಯರುಗಳು ಮತ್ತು ಲೈನ್‍ಮೆನ್‍ಗಳೇ ಸೂಚಿಸುತ್ತಿದ್ದಾರೆ. ಇದರಿಂದ ಉತ್ತಮ ಗುಣಮಟ್ಟದ ಟಿ.ಸಿ ಗಳನ್ನು ರಿಪೇರಿಗಾಗಿ ಖಾಸಗಿಯವರಿಗೆ ನೀಡಿದರೆ ಅವರು ಉತ್ತಮವಾದ ಬಿಡಿಭಾಗಗಳನ್ನು ತೆಗೆದು ಕಳಪೆ ಸಾಮಗ್ರಿಗಳನ್ನು ಹಾಕಿ ಕಳುಹಿಸುತ್ತಿದ್ದಾರೆ. ಇದರಿಂದ ಟಿ.ಸಿ.ಗಳು ಮತ್ತೆ ಮತ್ತೆ ಸುಟ್ಟುಹೋಗಿ ರೈತರಿಗೆ ತೊಂದರೆಯಾಗುತ್ತಿದೆ.
ಹಗ್ಗ ಮತ್ತು ರಾಟೆಗೆ ಹಣ ವಸೂಲಿ: ಟಿ.ಸಿ ಯನ್ನು ಎತ್ತಿ ಇಳುಕಲು ಅಗತ್ಯವಾದ ಹಗ್ಗ ಮತ್ತು ರಾಟೆ ಇಲಾಖೆಯಲ್ಲಿದ್ದರೂ ಇಲಾಖೆಯ ಆಸ್ತಿಯನ್ನು ಕೆಲವು ಖಾಸಗಿ ವ್ಯಕ್ತಿಗಳ ಬಳಿ ಇಟ್ಟು ರೈತರಿಂದ ಹಗ್ಗ ರಾಟೆಗೆ 500 ರೂ ಬಾಡಿಗೆ ವಸೂಲು ಮಾಡಲಾಗುತ್ತಿದೆ.
ಕಾರ್ಯಕರ್ತರ ಮನವಿಯನ್ನು ಆಲಿಸಿದ ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಪ್ರತಿಭಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣ, ರಾಜಶೇಖರ್ ಕೂಡಲೇ ನಮ್ಮ ಹಂತದಲ್ಲಿ ಆಗಬಹುದಾದ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಡಿ.ಎಸ್.ವೇಣು, ಜಿಲ್ಲಾ ಉಪಾದ್ಯಕ್ಷ ಗುರುಮೂರ್ತಿ, ಉಪಾದ್ಯಕ್ಷ ಶ್ರೀನಿಧಿ ಶ್ರೀನಿವಾಸ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಎ.ಆರ್.ಆನಂದ್, ಉಪಾದ್ಯಕ್ಷ ಅಮ್ಮುಶ್ರೀಧರ್, ಕಾರ್ಯದರ್ಶಿ ಮನು ಶೀಳನೆರೆ ಹೋಬಳಿ ಅಧ್ಯಕ್ಷ ಚನ್ನೇಗೌಡ, ಜಹೀರ್, ಆನಂದ್, ಗಿರೀಶ್, ಶೇಖರ್ ಗೌಡ, ಸುನಿಲ್, ಅಭಿ ಸೇರಿದಂತೆ ಹಲವರು ಹಾಜರಿದ್ದರು.