ಚೆಲುವನಾರಾಯಣಸ್ವಾಮಿಗೆ ತೆಪ್ಪೋತ್ಸವ

ಮೇಲುಕೋಟೆ,ಮಾ.೨೯ : ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸಿದ ಕಲ್ಯಾಣಿಯ ಮಧ್ಯೆ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಜಾತ್ರಾಮಹೋತ್ಸವದ ೮ನೇ ತಿರುನಾಳ್ ಅಂಗವಾಗಿ ಭಾನುವಾರ ರಾತ್ರಿ ತೆಪ್ಪೋತ್ಸವ ವೈಭವಯುತವಾಗಿ ನೆರವೇರಿತು. ಆಕರ್ಷಕವಾಗಿ ನಿರ್ಮಾಣವಾದ ಚಿನ್ನದಬಣ್ಣದ ತಾತ್ಕಲಿಕ ಮಂಟಪಕ್ಕೆ ವಿಶೇಷಪುಷ್ಪಾಲಂಕಾರ ನೆರವೇರಿಸಿ ರಾಜಮುಡಿಕಿರೀಟಧರಿಸಿ ವಿರಾಜಮಾನನಾದ ಚೆಲುವನಾರಾಯಣನಿಗೆ ಮೂರು ಪ್ರದಕ್ಷಿಣೆಯೊಂದಿಗೆ ತೆಪ್ಪೋತ್ಸವ ನೆರವೇರಿಸಲಾಯಿತು.
೧೨ ನೇ ಶತಮಾನದಲ್ಲಿ ರಾಮಾನುಜಾ ಚಾರ್ಯರು ಸಮಾಜದಲ್ಲಿ ತುಳಿತಕ್ಕೊಳಗಾದವ ರಿಗೆ ಮತ್ತು ದಲಿತರಿಗೆ ರಥೋತ್ಸವ,ತೆಪ್ಪೋತ್ಸವ ಹಾಗೂ ಬ್ರಹ್ಮೋತ್ಸವದಲ್ಲೇ ಪ್ರಧಾನ ದಿನವಾದ ಅವಭೃತ-ತೀರ್ಥಸ್ನಾನದಂದು ಸೇವೆಗಳಲ್ಲಿ ಭಾಗವಹಿಸಲು ಮುಕ್ತವಕಾಶ ಕಲ್ಪಿಸಿದ್ದರು. ೨೧ನೇ ಶತಮಾನದಲ್ಲಿ ಸಂವಿದಾನ ಜಾರಿಗೆ ಬಂದು ಸಮಾನ ಅವಕಾಶವಿದ್ದರೂ ಈ ಮೂರುದಿನಗಳಂದು ಹರಿಜನರು ಸ್ವಾಮಿಯ ಸೇವೆಗೆ ಮುಡಿಪಿಟ್ಟು ಕುಟುಂಬಸಮೇತ ಬಂದು ಭಕ್ತಿಯಿಂದ ಮಡಿಯುಟ್ಟು ತಿರುನಾಮಧರಿಸಿ ಭಗವಂತನ ದರ್ಶನಮಾಡಿ ಸೇವಾಸಂಪ್ರದಾಯ ನೆರವೇರಿಸುತ್ತಿದ್ದು, ಈ ಸಲವೂ ರಥೋತ್ಸವ ತೆಪ್ಪೋತ್ಸವದಲ್ಲಿ ಹೆಚ್ಚಿನ ದಲಿತಭಕ್ತರು ಪಾಲ್ಗೊಂಡು ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು.
ದೇವಾಲಯದಿಂದ ಸಂಜೆ ೬ಕ್ಕೆ ಹೊರಟ ಸ್ವಾಮಿಯ ಉತ್ಸವ ಕಲ್ಯಾಣಿಯ ಪ್ರವೇಶದ್ವಾರ ತಲುಪಿದ ತಕ್ಷಣ ಜೋಯಿಸರು ಮಹೂರ್ತಪಠಣ ನೆರವೇರಿಸಿದರು ನಂತರ ಸ್ವಾಮಿಗೆ ಮಂಗಳಾರತಿ ನೆರವೇರಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಎರಡು ಪ್ರದಕ್ಷಿಣೆಯ ನಂತರ ವಿಶೇಷ ಆರಾಧನೆ ಕೈಗೊಂಡು ಮತ್ತೆ ಮೂರನೆಯ ಸುತ್ತಿನ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು. ಕಲ್ಯಾಣಿಯ ನಾಲ್ಕೂ ಮೆಟ್ಟಿಲುಗಳ ಮೇಲೆ ಕುಳಿತ ಸಹಸ್ರಾರು ಭಕ್ತರು ತೆಪ್ಪೋತ್ಸವ ವೈಭವಕಣ್ತುಂಬಿಕೊಂಡರು. ತೆಪ್ಪೋತ್ಸವ ನಡೆಯುತ್ತಿದ್ದ ವೇಳೆ ಕಲ್ಯಾಣಿಯ ಸಮುಚ್ಚಯ ಹಾಗೂ ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯಕ್ಕೆ ನಯನಮನೋಹರ ದೀಪಾಲಂಕಾರ ಮಾಡಿದ್ದು ಭಕ್ತರ ಮನಸೂರೆಗೊಂಡಿತು. ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜನೆ ಮತ್ತು ಎಸ್.ಎನ್.ಐ ಸಾಂಸ್ಕೃತಿಕವೇದಿಕೆ ಸಂಯೋಜನೆಯಡಿ ವಿದ್ವಾನ್ ಪ್ರಮೋದ್, ಸುಬ್ಬಣ್ಣ ಅಮೋಘವಾಗಿ ನುಡಿಸಿದ ಸ್ಯಾಕ್ಸ್ ಪೋನ್ ವಾದನ ತೆಪ್ಪೋತ್ಸವಕ್ಕೆ ವಿಶೇಷ ಮೆರಗು ನೀಡಿತ್ತು. ಸೋಮವಾರ ಬೆಳಿಗ್ಗೆ ಸಂದಾನಸೇವೆ ನಂತರ ತೀರ್ಥಸ್ನಾನ ಮಹೋತ್ಸವ ನೆರವೇರಲಿದೆ.