ಚೆನ್ನೈನ ಗ್ರ್ಯಾಂಡ್ ಚೋಳಾ ಕೊರೊನಾ ಹಾಟ್ ಸ್ಪಾಟ್

ಚೆನ್ನೈ,ಜ.೩-ನಗರದ ಐಟಿಸಿ ಗ್ರ್ಯಾಂಡ್ ಚೋಳಾ ಹೋಟೆಲ್ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಕಳೆದ ಡಿ. ೧೫ ರಿಂದ ಇದುವರೆಗೆ ಅಲ್ಲಿನ ಸಿಬ್ಬಂದಿ ಸೇರಿದಂತೆ ಸುಮಾರು ೮೫ ಮಂದಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಹೊಟೇಲ್ ನಲ್ಲಿ ಇದುವರೆಗೆ ಸಂಗ್ರಹಿಸಲಾದ ಒಟ್ಟು ೬೦೯ ಗಂಟಲು ಮಾದರಿಗಳಲ್ಲಿ ೮೫ ಮಂದಿಯ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಹೋಟೆಲ್ ನಲ್ಲಿ ಎಲ್ಲಾ ಅತಿಥಿಗಳ ಸ್ಯಾಚುರೇಶನ್ ಪರೀಕ್ಷೆ ನಡೆಸಲು ಗ್ರೇಟರ್ ಚೆನ್ನೈ ನಿಗಮಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ
ಅಧಿಕಾರಿಗಳು ಆದೇಶಿಸಿರುವ ಮಾನದಂಡಗಳಿಗೆ ಅನುಸಾರವಾಗಿ ಪರೀಕ್ಷೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗರಿಷ್ಠ ಸಾಮಾಜಿಕ ಅಂತರ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಭಾಂಗಣದ ಶೇಕಡಾ ೫೦ ರಷ್ಟು ಸಾಮರ್ಥ್ಯವನ್ನು ಮಾತ್ರ ಬಳಸಲಾಗುತ್ತಿದೆ ಎಂದು ಐಟಿಸಿ ಗ್ರ್ಯಾಂಡ್ ಚೋಳ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ ೧೫ ರಂದು ಬಾಣಸಿಗರೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದ ನಂತರ ಮೊದಲ ಪ್ರಕರಣ ವರದಿಯಾಗಿದೆ.
ಡಿಸೆಂಬರ್ ೩೧, ಮತ್ತು ಜನವರಿ ೧, ರಂದು ೧೬ ಮತ್ತು ೧೩ ಪ್ರಕರಣಗಳು ವರದಿಯಾಗಿವೆ.
ಹೋಟೆಲ್ ಮತ್ತು ಸಿಬ್ಬಂದಿಯ ನಿವಾಸಗಳಿಂದ ಒಟ್ಟು ೬೦೯ ಗಂಟಲು ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ ೮೫ ಮಾದರಿ ಪಾಸಿಟಿವ್ ಆಗಿದೆ. ಅವರೆಲ್ಲರೂ ಸಾಮಾನ್ಯ ರೋಗಲಕ್ಷಣಗಳು ಕಂಡುಬಂದಿದ್ದು, ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಗಿದೆ ಎಂದು ರಾಧಾಕೃಷ್ಣನ್ ತಿಳಿಸಿದರು.
ಎಲ್ಲಾ ಸಿಬ್ಬಂದಿಯನ್ನು ನಿಯಮಿತವಾಗಿ ಪರೀಕ್ಷಿಸಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೋಟೆಲ್ ತಿಳಿಸಿದೆ.
“ಎಲ್ಲಾ ಸ್ಪರ್ಶ ಕೇಂದ್ರಗಳಲ್ಲಿ ತೀವ್ರ ಕಾಳಜಿ ವಹಿಸಲಾಗುತ್ತಿದೆ. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ” ಎಂದು ಅದು ಹೇಳಿದೆ.