ಹುಬ್ಬಳ್ಳಿ, ಸೆ 21: ನಗರದ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ವಿಸರ್ಜನೆಯನ್ನು ಇಂದು ಸಂಭ್ರಮ ಸಡಗರದಿಂದ ನೆರವೇರಿಸಲಾಯಿತು.
ನಗರದ ಹೃದಯಭಾಗವಾದ ಚೆನ್ನಮ್ಮ ವೃತ್ತದ ಬಳಿ ಇರುವ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಮೂರು ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ ನಗರದಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಸಾಂಸ್ಕøತಿಕ ವೈಭವ ಆಕರ್ಷಕವಾಗಿತ್ತು. ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸುತ್ತಿರುವುದು ಕಂಡು ಬಂತು. ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯು ಕಿತ್ತೂರು ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಿಂದ ಸಾಗಿ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ನಗರದ ಇಂದಿರಾ ಗಾಜಿನ ಮನೆಯವರೆಗೂ ಸಾಗಿ, ನಂತರ ಪಕ್ಕದ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ, ಮಹೇಶ ಟೆಂಗಿನಕಾಯಿ, ಎಮ್.ಆರ್. ಪಾಟೀಲ, ಮಾಜಿ ಶಾಸಕ ಅಮೃತ ದೇಸಾಯಿ ಸೇರಿದಂತೆ ಪ್ರಮುಖರಾದ ಸಂಜೀವ್ ಬಡಸ್ಕರ್, ಸುಭಾಷ್‍ಸಿಂಗ್ ಜಮಾದಾರ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು.
ಪೆÇಲೀಸ್ ಬಂದೋಬಸ್ತ್:
ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು, ಡಿಸಿಪಿ, ಎಸಿಪಿ, ಇನ್ಸ್‍ಪೆಕ್ಟರ್‍ಗಳ ತಂಡ, ಪ್ಯಾರಾಮಿಲಿಟರಿ, ರ್ಯಾಪಿಡ್ ಆಕ್ಷನ್ ಫೋರ್ಸ್ ಸ್ಥಳದಲ್ಲಿದ್ದರೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಪೆÇಲೀಸರು ಹದ್ದಿನ ಕಣ್ಣು ಇರಿಸಿದ್ದರು. ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.
ರಸ್ತೆ ಸಂಚಾರ ಬದಲಾವಣೆ:
ಗಣೇಶನ ವಿಸರ್ಜನೆ ಹಿನ್ನಲೆ ಸಂಚಾರ ದಟ್ಟನೆಯಾಗಬಾರದೆಂಬ ನಿಟ್ಟಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿತ್ತು. ದೂರ ಊರಿಗೆ ಪ್ರಯಾಣಿಸಬೇಕಾದವರು ಇದರಿಂದ ಹೈರಾಣಾಗಿದ್ದುದು ಕಂಡುಬಂತು.