ಚೆನ್ನಮ್ಮನ ವೃತ್ತದಲ್ಲಿ ಲಾರಿ ಪಲ್ಟಿ : ತಪ್ಪಿದ ಭಾರೀ ಅನಾಹುತ

ಹುಬ್ಬಳ್ಳಿ, ನ 6: ಸರಕು ತುಂಬಿದ ಲಾರಿಯೊಂದು ನಗರದ ಚೆನ್ನಮ್ಮ ವೃತ್ತದಲ್ಲಿ ಪಲ್ಟಿಯಾಗಿ ಕೆಲ ಕಾಲ ಸಂಚಾರ ದಟ್ಟಣೆಯಾದ ಘಟನೆ ಇಂದು ಬೆಳಿಗ್ಗೆ ನಡೆಯಿತು.
ಹರಿಯಾಣದಿಂದ ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಯಲ್ ಪ್ರದೇಶಕ್ಕೆ ಹೊರಡುತ್ತಿದ್ದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಲಾರಿಯಲ್ಲಿ ಬೆಳ್ಳುಳ್ಳಿ ಹಾಗೂ ಹಲ್ಲುಜ್ಜುವ ಪೇಸ್ಟ್ ತುಂಬಿಕೊಂಡು ಬರಲಾಗುತ್ತಿತ್ತು ಎನ್ನಲಾಗಿದೆ. ಲಾರಿ ಪಲ್ಟಿಯಾಗುತ್ತಿದ್ದಂತೆ, ಚಾಲಕ ಸಾಹುಲ ಖಾನ್ ಹಾಗೂ ಕ್ಲೀನರ್ ಮೊಹಮ್ಮದ ಸಯೀಫ್ ತಕ್ಷಣ ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಬ್ಬಳ್ಳಿಯ ಹೃದಯ ಭಾಗವಾದ ಚೆನ್ನಮ್ಮ ವೃತ್ತದಲ್ಲೇ ಈ ಘಟನೆ ನಡೆದಿದ್ದು, ಬಿದ್ದ ಲಾರಿಯನ್ನ ಮೇಲೆತ್ತಲು ಹರಸಾಹಸ ಪಡುವಂತಾಯಿತು. ಎರಡು ಹಿಟ್ಯಾಚಿಗಳನು ತೆಗೆದುಕೊಂಡು ಬಂದು ಲಾಯಿಯನ್ನು ಮೇಲಕ್ಕೆ ಎತ್ತಲಾಯಿತು. ಲಾರಿ ತೆಗೆಯುವ ಸಂದರ್ಭದಲ್ಲಿ ಕೆಲ ಕಾಲ ಸಂಚಾರಕ್ಕೆ ಅಡತಡೆಯೂ ಉಂಟಾಯಿತು. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.