ಚೆಕ್ ಡ್ಯಾಮ್ ಕೆಸರಲ್ಲಿ ಸಿಲುಕಿ ಬಾಲಕ ಸಾವು

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.12 :- ಮೂವರು ಬಾಲಕರು ಈಜಾಡಲು ಹೋಗಿದ್ದು ಓರ್ವ  ಬಾಲಕ ಚೆಕ್ ಡ್ಯಾಮ್ ಕೆಸರಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣಾ ಸರಹದ್ದಿನ ಸಂಡೂರು ತಾಲೂಕು ಸ್ವಾಮಿಹಳ್ಳಿ -ಹೊಸೂರು ನಡುವಿನ ಚೆಕ್ ಡ್ಯಾಮ್ ವೊಂದರಲ್ಲಿ ಶನಿವಾರ ಜರುಗಿದೆ.
ಪೋತಲಕಟ್ಟೆಯ ಗುತ್ತಿಶಪ್ಪರ  ಸ್ವಾಮಿ(17) ಚೆಕ್ ಡ್ಯಾಮ್ ನ ಕೆಸರಲ್ಲಿ ಸಿಲುಕಿ ಸಾವನ್ನಪ್ಪಿರುವ ದುರ್ದೈವಿ ಬಾಲಕನಾಗಿದ್ದಾನೆ.  ಈತನು  ಪೋತಲಕಟ್ಟೆಯಿಂದ  ಸ್ವಾಮಿಹಳ್ಳಿಗೆ ತನ್ನ ಅಕ್ಕ ಲಲಿತಮ್ಮಳನ್ನು ಮದುವೆ ಮಾಡಿಕೊಟ್ಟಿದ್ದು ಕಳೆದ ಹದಿನೈದು ದಿನದ ಹಿಂದಷ್ಟೇ ಅಕ್ಕನ ಮನೆಗೆ ಸ್ವಾಮಿ ಬಂದಿದ್ದು ನಿನ್ನೆ ಮಧ್ಯಾಹ್ನ ಅಕ್ಕನ ಊರಿನ ಸ್ನೇಹಿತರಾದ ಪ್ರದೀಪ್ ಮತ್ತು ಪ್ರತಾಪ್ ನೊಂದಿಗೆ ಸ್ವಾಮಿಹಳ್ಳಿ ಗ್ರಾಮದ ಹೊರವಲಯದಲ್ಲಿ ಹೋಗಿ ಸೀತಾಫಲ ಕಿತ್ತುಕೊಂಡು ಅಲ್ಲೇ ಹತ್ತಿರದ ಸ್ವಾಮಿಹಳ್ಳಿ -ಹೊಸೂರಿನ ಮಧ್ಯದ ಪ್ರದೇಶದಲ್ಲಿ ಚೆಕ್ ಡ್ಯಾಮ್ ನಿರ್ಮಿಸಲಾಗಿದ್ದು ಇದರಲ್ಲಿ ಮೂವರು ಈಜಾಡಲು ಹೋದಾಗ ಹತ್ತು ಅಡಿ ಆಳದ ಡ್ಯಾಮ್ ನ ಕೆಸರಲ್ಲಿ ಸಿಲುಕಿದ ಸ್ವಾಮಿ ಮೇಲೆ ಬರಲು ಆಗದೆ ಇದ್ದು ಇನ್ನಿಬ್ಬರು ಸ್ನೇಹಿತರು ಮನೆಗೆ ಬಂದು ವಿಷಯ ತಿಳಿಸಿದ್ದು ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು ತೀವ್ರ ಶೋಧ ನಡೆಸಿದ ನಂತರ ಕೆಸರಲ್ಲಿ ಸಿಲುಕಿದ ಸ್ವಾಮಿ ಮೃತದೇಹ ಮೊನ್ನೆ ರಾತ್ರಿ 9ಗಂಟೆ ಸುಮಾರಿಗೆ ಸಿಕ್ಕಿರುವುದಾಗಿ ತಿಳಿದಿದೆ. 
ಮೃತನ ಸಹೋದರ ಶೇಖರ ನೀಡಿದ ದೂರಿನಂತೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ  ಬೆಳಿಗ್ಗೆ ಪ್ರಕರಣ ದಾಖಲಾಗಿದೆ.                                                                                               ಪಾಲಕ ಪೋಷಕರೇ ಮಕ್ಕಳ ಬಗ್ಗೆ ಎಚ್ಚರವಿರಲಿ :-  ಮಕ್ಕಳ ಚಲನವಲನದ ಬಗ್ಗೆ ಪಾಲಕಪೋಷಕರು ಗಮನ ಹರಿಸಬೇಕಾಗಿದ್ದು ಕಳೆದೆರಡು ದಿನದ ಹಿಂದಷ್ಟೇ ಕೂಡ್ಲಿಗಿ ತಾಲೂಕಿನ ಎಂ ಬಿ ಅಯ್ಯನಹಳ್ಳಿಯ ಬಾಲಕನೋರ್ವ ಹುಡುಗರೊಂದಿಗೆ ಕೆರೆಕಡೆಗೆ ಹೋಗಿ ಆಕಸ್ಮಿಕ ಬಿದ್ದು ಈಜಾಡಲು ಬಾರದೆ  ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸುದ್ದಿ ಮರೆಮಾಚುವ ಮುನ್ನವೇ ಗುಡೇಕೋಟೆ ಠಾಣಾ ಸರಹದ್ದಿನಲ್ಲಿ ಚೆಕ್ ಡ್ಯಾಮ್ ಕೆಸರಲ್ಲಿ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಸುದ್ದಿ ದುಃಖ ತರುವಂತಾಗಿದ್ದು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ  ಪಾಲಕ ಪೋಷಕರು ವಹಿಸಿದಲ್ಲಿ ಇಂತಹ ಅಚಾತುರ್ಯ ಘಟನೆ ನಡೆಯದಂತೆ ತಡೆಯಬಹುದಾಗಿದೆ ಎಂದು ಪೊಲೀಸರು ಪಾಲಕ ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.