ಚೆಕ್ ಡ್ಯಾಂ ಭರ್ತಿ: ಶಾಸಕರಿಂದ ಬಾಗಿನ ಅರ್ಪಣೆ

ಅರಸೀಕೆರೆ, ಸೆ. ೧೭- ತಾಲ್ಲೂಕಿನ ನೀರಿನ ಬವಣೆ ನೀಗಿಸಲು ಎಲ್ಲೆಡೆ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ತಾಲ್ಲೂಕಿನ ಡಿ.ಎಂ. ಕುರ್ಕೆ ಗ್ರಾಮದ ಸಮೀಪ ಸೊಪ್ಪಿನಹಳ್ಳಿ ರಸ್ತೆಯಲ್ಲಿ ೫೦ ಲಕ್ಷ ರೂ. ಗಳಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂ ಇತ್ತೀಚೆಗೆ ಸುರಿದ ಮಳೆಗೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. ಈ ಡ್ಯಾಂನಿಂದ ಸೊಪ್ಪಿನಹಳ್ಳಿ, ಡಿ.ಎಂ. ಕುರ್ಕೆ ಗ್ರಾಮಗಳ ಅಂತರ್ಜಲಮಟ್ಟ ಏರಿಕೆಯಾಗಲಿದೆ. ತಾಲ್ಲೂಕಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು ಎಲ್ಲ ಜಲಾಶಯಗಳು ತುಂಬಿದೆ. ಈ ನಿಟ್ಟಿನಲ್ಲಿ ಹೇಮಾವತಿ ನದಿ ನೀರು ಕಣಕಟ್ಟೆ ಹೋಬಳಿಗೆ ಹರಿಯುತ್ತಿದೆ. ಮಳೆ ನೀರು ಹೇಮಾವತಿ ನದಿ ನೀರು ಎರಡು ಸೇರಿ ತಾಲ್ಲೂಕಿನಲ್ಲಿ ನಿರ್ಮಿಸಿರುವ ಚೆಕ್ ಡ್ಯಾಮ್‌ಗಳು ತುಂಬಿ ತುಳುಕುತ್ತಿವೆ. ಇದರಿಂದ ಅಂತರ್ಜಲ ಮಟ್ಟ ಸುಧಾರಿಸಿ ಕೊಳವೆ ಬಾವಿಗಳಲ್ಲಿ ನೀರು ಬಂದು ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಶಶಿಕುಮಾರ್, ಪಿಡಬ್ಲ್ಯೂಡಿ ನಿವೃತ್ತ ಇಂಜಿನಿಯರ್ ಎಂ.ಎಂ. ಶೇಖರಪ್ಪ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ರವೀಶ್, ಡಿಎಂ ಕುರ್ಕೆ ಗ್ರಾಮದ ಜೆಡಿಎಸ್ ಮುಖಂಡ ಸುರೇಶ್, ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.