ಚೆಕ್‍ಪೋಸ್ಟ್ ಬಳಿ ಆಟೋ ನಿಲ್ದಾಣಕ್ಕೆ ಆಗ್ರಹಿಸಿ ಚಾಲಕರಿಂದ ಸತ್ಯಾಗ್ರಹ

ಕಲಬುರಗಿ. ಜ.7:ನಗರದ ಆಳಂದ್ ರಸ್ತೆಯಲ್ಲಿರುವ ಚೆಕ್ ಪೋಸ್ಟ್ ಬಳಿ ಆಟೋ ನಿಲ್ದಾಣ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ಸಂಘಟನೆ ವೇದಿಕೆಯ ನೇತೃತ್ವದಲ್ಲಿ ಆಟೋ ಚಾಲಕರು ಗುರುವಾರ ಚೆಕ್ ಪೋಸ್ಟ್ ಬಳಿ ಧರಣಿ ಸತ್ಯಾಗ್ರಹದ ಮೂಲಕ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಚಿಂಚನಸೂರ್ ಅವರು ಮಾತನಾಡಿ, ಕಳೆದ 2019ರ ಸೆಪ್ಟೆಂಬರ್ 19ರಂದು ಆಳಂದ್ ಚೆಕ್ ಪೋಸ್ಟ್ ಹತ್ತಿರ ಆಟೋ ನಿಲುಗಡೆಗೆ ಸ್ಥಳದ ಸಲುವಾಗಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಪಾಲಿಕೆಯವರು ಸ್ಥಳ ಪರಿಶೀಲನೆ ಮಾಡಿದ್ದರು. ಆದಾಗ್ಯೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಅಲ್ಲಿನ ಅಂಗಡಿ, ಮುಂಗಟ್ಟುಗಳವರು ತೊಂದರೆ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮತ್ತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸ್ಥಳ ಕೊಡಲು ಮನವಿ ಮಾಡಲಾಗಿತ್ತು. ಅಲ್ಲಿನ ಸಿಬ್ಬಂದಿಗಳು ಸಮಸ್ಯೆಗೆ ಸ್ಪಂದಿಸದೇ ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಅವರು ಆರೋಪಿಸಿದರು. ಕೂಡಲೇ ಆಟೋ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಚಿಂಚನಸೂರ್, ಉಪಾಧ್ಯಕ್ಷ ಗಿರೀಶ್ ಬಂಗಾರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕಾಶ್ ಚೋಪ್ರಾ, ಸಾಗರ್ ಬಾವಿ, ಪರಶುರಾಮ್ ಬಿರಾದಾರ್, ಮಹಮದಿ ಆಫೀಜ್, ಬಲಭೀಮ್ ದೊರೆ, ನಾಗರಾಜ್, ಶಂಕರ್ ದೊಡ್ಡಮನಿ, ರಾಜಕುಮಾರ್ ಲಮಾಣಿ, ಮಹಿಬೂಬ್ ಮುಲ್ಲಾ, ಎಂ.ಡಿ. ಹಾಜಿ, ನರೇಂದ್ರ, ಖುರ್ಷಿದ್ ಸಾಬ್, ಧನಂಜಯ್ ರಾಠೋಡ್, ಅವಿನಾಶ್ ಚಿಂಚನಸೂರ್, ಅವಿನಾಶ್ ರಾಠೋಡ್, ಸುರೇಶ್ ರಾಠೋಡ್, ಸಂತೋಷ್ ಶಿವಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.