ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ

ಚಾಮರಾಜನಗರ, ಏ.22:-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಚಾಮರಾಜನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬಿಸಲವಾಡಿ, ಚಿಕ್ಕಹೊಳೆ, ಬಂದಿಗೌಡನಹಳ್ಳಿ, ಮೂಡಲ ಹೊಸಹಳ್ಳಿ, ಎತ್ತಗಟ್ಟಿ ಬೆಟ್ಟ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಲ್ಲಿ ನಿರ್ವಹಿಸಲಾಗುತ್ತಿರುವ ಕಾರ್ಯಗಳ ಪರಿಶೀಲನೆ ನಡೆಸಿದರು.
ಪ್ರತಿಚೆಕ್ ಪೋಸ್ಟ್ ಗಳಲ್ಲಿ ಬಹು ಹೊತ್ತು ನಿಂತು ಜಿಲ್ಲಾಧಿಕಾರಿಯವರು ತಪಾಸಣಾ ಕಾರ್ಯ ವೀಕ್ಷಿಸಿದರು.
ಭೇಟಿಯ ವೇಳೆ ಪ್ರತಿಚೆಕ್ ಪೋಸ್ಟ್‍ನಲ್ಲಿ ಸಂಚರಿಸಿರುವ ವಾಹನಗಳ ಸಂಖ್ಯೆ, ಎಷ್ಟು ವಾಹನಗಳನ್ನು ತಪಾಸಣೆ ಮಾಡಲಾಗಿದೆ? ತಪಾಸಣೆ ವೇಳೆ ದಾಖಲು ಮಾಡಿರುವ ವಿವರಗಳನ್ನು ಚೆಕ್ ಪೋಸ್ಟ್‍ಗೆ ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿಯಿಂದಜಿಲ್ಲಾಧಿಕಾರಿಯವರು ಪಡೆದರು. ಚೆಕ್ ಪೋಸ್ಟ್ ನಲ್ಲಿ ನಿರ್ವಹಿಸಲಾಗುತ್ತಿರುವ ರಿಜಿಸ್ಟರ್, ಅಲ್ಲಿ ನಮೂದಾಗಿರುವ ವಿವರಗಳನ್ನು ಪರಿಶೀಲಿಸಿದರು.
ದಿನದ 24*7 ವೇಳೆಯಲ್ಲಿಯೂ ಕಟ್ಟೆಚ್ಚೆರದಿಂದಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಮಾಡಬೇಕು. ದಾಖಲೆ ಇಲ್ಲದ ಹಣ, ವಸ್ತುಗಳು ಕಂಡು ಬಂದಲ್ಲಿಕೂಡಲೇ ವಶಕ್ಕೆ ಪಡೆದು ಮುಂದಿನ ಕ್ರಮಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.