ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕು

ಹುಳಿಯಾರು, ಏ. ೩- ವಿಧಾನಸಭೆ ಚುನಾವಣೆ ನೀತಿ ಸಂಹಿತಿ ಜಾರಿಯಾಗಿರುವುದರಿಂದ ತುಮಕೂರು ಜಿಲ್ಲೆಯ ಗಡಿ ಪ್ರದೇಶಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.
ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಮತ್ತು ಅನಧಿಕೃತವಾಗಿ ವಸ್ತುಗಳನ್ನು ನೀಡುವುದು. ದಾಖಲೆಯಿಲ್ಲದ ಹಣವನ್ನು ಸಾಗಾಣೆ ಮಾಡುವುದು ಸೇರಿದಂತೆ ಆಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೇ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹದ್ದಿನ ಕಣ್ಣಿಡಲಾಗಿದೆ. ಇದರ ಭಾಗವಾಗಿ ಹುಳಿಯಾರು ಹೋಬಳಿಯ ಪುರದಮಠ, ಯಳನಾಡು ಹಾಗೂ ದೊಡ್ಡಎಣ್ಣೇಗೆರೆ ಗೇಟ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ.
೫೦ ಸಾವಿರಕ್ಕಿಂತ ಹೆಚ್ಚು ಹಣ, ಶಸ್ತ್ರಾಸ್ತ್ರ, ಆಭರಣ, ಅಗತ್ಯಕ್ಕಿಂತ ಹೆಚ್ಚು ಗೃಹಬಳಕೆ ವಸ್ತುಗಳನ್ನು ಸಾಗಿಸುವಂತಿಲ್ಲವಾದ್ದರಿಂದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿ ವಾಹನಗಳನ್ನು ಬಿಡುತ್ತಿದ್ದಾರೆ. ಅಲ್ಲದೆ ಒಳ ಬರುವ ವಾಹನಗಳ ಸಂಖ್ಯೆ, ಚಾಲಕನ ಹೆಸರು, ತೆರಳುವ ಊರಿನ ಬಗ್ಗೆ ಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ.
ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಷ್ಟೇ ಅಲ್ಲದೆ, ಅರಣ್ಯ, ಅಬಕಾರಿ, ಕಂದಾಯ, ಶಿಕ್ಷಣ ಇಲಾಖೆ ಅಧಿಕಾರಿಗಳು ದಿನವಿಡೀ ಪಾಳಿಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಸಾಗಿಸುವ ರೈತರಿಗೆ, ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಸುಗಮ ಸಮಚಾರಕ್ಕೆ ನೆರವಾಗುತ್ತಿದ್ದಾರೆ.