ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಬಿಗಿಗೊಳಿಸಲು ಮುರಳಿಕುಮಾರ್ ಸೂಚನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.24:- ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ತೆರೆಯಲಾಗಿರುವ ಅಂತರರಾಜ್ಯ ಹಾಗೂ ಅಂತರಜಿಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಗಳನ್ನು ಬಿಗಿಗೊಳಿಸುವಂತೆ ವಿಶೇಷ ವೆಚ್ಚ ವೀಕ್ಷಕರಾದ ಬಿ. ಮುರಳಿಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಕ್ಷೇತ್ರವ್ಯಾಪ್ತಿಯಲ್ಲಿ ನಡೆಯಲಿರುವ ಚುನಾವಣಾ ಪ್ರಕ್ರಿಯೆಗಳ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರಕ್ಕೆ ಇದೇ ತಿಂಗಳ 26ರಂದು ಮತದಾನ ನಡೆಯಲಿದ್ದು, ಮತದಾನಕ್ಕೆ 72 ಗಂಟೆಗಳ ಸಮಯಾವಕಾಶ ಬಾಕಿ ಇದೆ. ಈ ಅವಧಿಯಲ್ಲಿ ಕ್ಷೇತ್ರವ್ಯಾಪ್ತಿಯಲ್ಲಿ ಯಾವುದೇ ಚುನಾವಣಾ ಅಕ್ರಮಗಳಾಗದಂತೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ತೆರೆಯಲಾಗಿರುವ ಅಂತರರಾಜ್ಯ ಹಾಗೂ ಅಂತರ ಜಿಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಗಳನ್ನು ಚುರುಕುಗೊಳಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಎಫ್.ಎಸ್.ಟಿ. ಅಧಿಕಾರಿಗಳಿಗೆ ನಿಗಾ ವಹಿಸುವಂತೆ ಸೂಚಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಿದ್ದೇವೆ. ಮತದಾನ ಮುಕ್ತಾಯದ 72 ಗಂಟೆಗಳ ಪೂರ್ವ ಅವಧಿಯಲ್ಲಿ ಅತ್ಯಂತ ಕಟ್ಟೆಚ್ಚೆರದಿಂದ ಎಲ್ಲವನ್ನೂ ಗಮನಿಸಲಾಗುತ್ತದೆ. ಯಾವುದೇ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೂ ದಿನದ 24 ಗಂಟೆ ಅವಧಿಯಲ್ಲಿಯೂ ತಿಳಿಸಬಹುದು. ಕಂಟ್ರೋಲ್ ರೂಂ ಮೂಲಕವು ಯಾವುದೇ ಅಕ್ರಮಗಳ ಬಗ್ಗೆ ಮಾಹಿತಿ ನೀಡಬಹುದು. ಅಲ್ಲದೆ ಈ ಅವಧಿಯಲ್ಲಿ ದೈನಂದಿನ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಸಿ-ವಿಜಲ್ ಆಪ್ ನಲ್ಲಿ ದಾಖಲಾಗುವ ದೂರುಗಳನ್ನು ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ಯಾವುದೇ ವಿಳಂಬಕ್ಕೆ ಆಸ್ಪದ ನೀಡಬಾರದು. ಆಪ್ ನಲ್ಲಿ ದಾಖಲಾಗುವ ದೂರುಗಳನ್ನು ತಪಾಸಣೆ ಮಾಡಲು ನಿಗಧಿತ ಸಮಯದಲ್ಲಿ ಕ್ರಮ ವಹಿಸಬೇಕು.
ಕೆಲವು ಬಾರಿ ದೂರು ದಾಖಲಾದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಸ್ಥಳದಲ್ಲಿ ಯಾವುದೇ ಮಾಹಿತಿ ಲಭ್ಯವಾಗದಿರಬಹುದು. ಅಂತಹ ಸಮಯದಲ್ಲಿ ದೂರು ನೀಡಿದ ವ್ಯಕ್ತಿಗಳನ್ನು ಸಂಪರ್ಕಿಸಿ ತಪಾಸಣೆ ಮುಂದುವರಿಸಬಹುದಾಗಿದೆ ಎಂದು ತಿಳಿಸಿದರು.
ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳಾಗದಂತೆ ಎಚ್ಚರ ವಹಿಸಬೇಕು. ಮುಕ್ತ ಪಾರದರ್ಶಕ ಚುನಾವಣೆಗೆ ಜನರು ಸಹಕಾರ ನೀಡಬೇಕು ಎಂದು ಚುನಾವಣಾ ವಿಶೇಷ ವೆಚ್ಚ ವೀಕ್ಷಕರಾದ ಮುರಳಿಕುಮಾರ್ ಅವರು ತಿಳಿಸಿದರು.
ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಭೆಯ ಆರಂಭದಲ್ಲಿ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಚುನಾವಣಾ ಪ್ರಕ್ರಿಯೆಗಳ ಸಿದ್ದತೆಗಳ ಕುರಿತು ಪವರ್ ಪಾಯಿಂಟ್ ಮೂಲಕ ವಿಶೇಷ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ವಿವಿಧ ನೋಡೆಲ್ ಅಧಿಕಾರಿಗಳು, ಇತರೆ ಅರ್ಧಇಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.