ಚೆಂಬು: ಡೆಂಗ್ಯು ಜ್ವರದಿಂದ ಮಹಿಳೆ ಮೃತ್ಯು

ಸುಳ್ಯ, ಎ.೬- ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಚೆಂಬು ಗ್ರಾಮದ ಉಂಬಳೆಯಲ್ಲಿ ಇತ್ತೀಚೆಗೆ ಸಂಭವಿಸಿದೆ.

ಚೆಂಬು ಗ್ರಾಮದ ಉಂಬಳೆ ಶ್ರೀಧರ ನಾಯ್ಕರ ಪತ್ನಿ ವೇದಾವತಿ (೩೨) ಜ್ವರದ ಹಿನ್ನೆಲೆಯಲ್ಲಿ ವಾರದ ಹಿಂದೆ ಕಲ್ಲುಂಗುಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಅಲ್ಲಿ ಗುಣಮುಖರಾಗದೇ ಹೋದಾಗ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಾಗ ಪರೀಕ್ಷಿಸಿದ ವೈದ್ಯರು ಡೆಂಗ್ಯೂ ಜ್ವರ ಎಂದು ಹೇಳಿದರಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರೆನ್ನಲಾಗಿದೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇದಾವತಿಯವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಮೃತರು ಪುತ್ರಿ ಸುಶ್ಮಿತ, ತಂದೆ ಬುದ್ದ ನಾಯ್ಕ, ಸಹೋದರ ನಾರಾಯಣ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.