ಚು.ಆಯೋಗದ ಮಾರ್ಗಸೂಚಿ ಅನುಸಾರ ಕಾರ್ಯನಿರ್ವಹಿಸಿ: ಡಿ.ಸಿ

ಬೀದರ.ಮಾ.23: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ತಂಡಗಳಿಗೆ ಬಸವಕಲ್ಯಾಣ ನಗರದ ತೇರು ಮೈದಾನದಲ್ಲಿನ ಸಭಾಭವನದಲ್ಲಿ ತರಬೇತಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಮಾತನಾಡಿ, ಉಪ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಕಾರ್ಯ ನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಯಾವುದೇ ಮಾಹಿತಿಯನ್ನು ಕಳುಹಿಸುವಲ್ಲಿ ನಿರ್ಲಕ್ಷ್ಯ ತೋರದೇ ಸಕಾಲಕ್ಕೆ ಸಲ್ಲಿಸಲು ಗಮನ ಹರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಮಾತನಾಡಿ, ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಕೂಡ ಅಚ್ಚುಕಟ್ಟಾಗಿ ನಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರು ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಣೆಗೆ ಒತ್ತು ಕೊಡಬೇಕು ಎಂದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಅವರು, ಸೆಕ್ಟರ್ ಆಫೀಸರ್, ಎಸ್‍ಎಸ್‍ಟಿ, ವಿಎಸ್‍ಟಿ, ವಿವಿಟಿ ಸೇರಿದಂತೆ ಇನ್ನೀತರ ತಂಡಗಳ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.
ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ್, ಬಸವಕಲ್ಯಾಣ ಮತ್ತು ಹುಲಸೂರ ತಹಸೀಲ್ದಾರ ಅವರು ಇದ್ದರು.