ಚುನಾವಾಣಾ ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ ಘೋಷಣಾ ಪತ್ರ ಕಡ್ಡಾಯಚುನಾವಣಾ ಅಕ್ರಮಗಳಿಗೆ ಬಳಕೆಯಾಗದೇ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಿ

ವಿಜಯಪುರ:ಮಾ.31: ರಾಜ್ಯ ಚುನಾವಾಣಾ ಆಯೋಗ ವಿಧಾನ ಸಭೆಗೆ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಜಾಹೀರಾತುಗಳು, ಕರಪತ್ರ, ಪೊಸ್ಟರ್, ಪಾಂಪ್ಲೆಟ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳ ಮುದ್ರಣಕ್ಕೆ ಘೋಷಣಾ ಪತ್ರ ಹಾಗೂ ಆಭರಣ ಮಳಿಗೆದಾರರು ಯಾವುದೇ ವ್ಯವಹಾರಕ್ಕೆ ದಾಖಲೆಗಳ ನಿರ್ವಹಣೆ ಕಡ್ಡಾಯ ಹಾಗೂ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲೆಯ ಲಿಕ್ಕರ್ ಶಾಪ್, ಜ್ಯುವೆಲರ್ಸ್ ಅಂಗಡಿ ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆ ನಡೆಸಿದ ಅವರು, ಪಾರದರ್ಶಕ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಮುದ್ರಣ ಸಾಮಗ್ರಿಗಳಾದ ಕರಪತ್ರ,ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಎಲ್ಲ ತರಹದ ಪ್ರಚಾರ ಸಾಮಗ್ರಿಗಳ ಮೇಲೆ ಮೇಲೆ ಮುದ್ರಕರ ಹೆಸರು, ವಿಳಾಸ, ಪ್ರತಿಗಳ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಈ ಕುರಿತು ಸಂಬಂಧಿಸಿದ ಅಭ್ಯರ್ಥಿಗಳಿಂದ ಘೋಷಣಾ ಪತ್ರ ಪಡೆಯಬೇಕು. ಘೊಷಣಾ ಪತ್ರದ ಒಂದು ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಪ್ರಿಂಟಿಂಗ್ ಪ್ರೆಸ್ ಮಾಲೀಕರು ಚುನಾವಣಾ ಆಯೋಗದ ನಿರ್ದೇಶನಗಳನ್ನು ತಪ್ಪದೇ, ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರಾದರೂ ಚುನಾವಣಾ ನಿರ್ದೇಶನಗಳನ್ನು ಪಾಲಿಸದಿರುವುದು ಕಂಡು ಬಂದಲ್ಲಿ ಅಂತಹ ಮುದ್ರಣಾಲಯಗಳ ಮೇಲೆ ಕಾನೂನು ರಿತ್ಯ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ ಅವರು, ಈ ಕಾರ್ಯದಲ್ಲಿ ಅಲಕ್ಷ್ಯ ವಹಿಸದೇ ಜಿಲ್ಲಾಡಳಿತದೊಂದಿಗೆ ಸಹಕರಿಸಿ, ಮುಕ್ತ ಹಾಗೂ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಕೈ ಜೋಡಿಸುವಂತೆ ಅವರು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಮದ್ಯದ ಪ್ರಭಾವ ಬೀರಲು ಯತ್ನಿಸುವ ಹಾಗೂ ಅಕ್ರಮ ಸಾಗಾಣಿಕೆ ಅಥವಾ ವಿತರಣೆ ಕೈಗೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಎಲ್ಲ ಮದ್ಯ ಮಾರಾಟ ಸನ್ನದುದಾರರು ವ್ಯವಹರಿಸುವ ವ್ಯವಹಾರಕ್ಕೆ ಸಂಬಂಧಿಸಿದಂತೆ ರಸೀದಿ ಹಾಗೂ ದಾಖಲೆ ಹೊಂದಿರಬೇಕು. . ಮತದಾರರ ಮೇಲೆ ಪ್ರಭಾವ ಬೀರಲು ಮದ್ಯ ಆಮೀಷ ಒಡ್ಡುವ ಸಂದರ್ಭ ಇರುವುದರಿಂದ ಎಲ್ಲ ವ್ಯವಹಾರಕ್ಕೂ ಸನ್ನದ್ದುದಾರರು ದಾಖಲೆಗಳನ್ನು ಹೊಂದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚುನಾವಣಾ ಸಂದರ್ಭದಲ್ಲಿ ಅಕ್ರಮವೆಸಗಲು ರೀಯಲ್ ಎಸ್ಟೇಟ್, ಹೊಟೇಲ್, ಜುವೆಲರ್ಸ್‍ಗಳ ಬಳಕೆಯಾಗುವುದರಿಂದ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಯಾವುದೇ ಚುನಾವಣಾ ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸದೇ ಎಚ್ಚರಿಕೆಯಿಂದಿರಬೇಕು. ಅನಾವಶ್ಯಕ ತೊಂದರೆಗೆ ಒಳಗಾಗದೇ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ್ ಮುರಗಿ, ಅಬಕಾರಿ ಇಲಾಖೆಯ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಪತ್ರಾಧಿಕಾರಿ ಆರ್.ಎಸ್.ಅಥಣಿ, ಲೀಡ್ ಬ್ಯಾಂಕ್ ಮ್ಯಾನೇಜರ್ ನರೇಂದ್ರ ಬಾಬು ಎನ್.ವಿ, ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎಸ್.ಎಲ್. ಸಲಗರೆ, ಜಿಲ್ಲಾ ಆಭರಣ ಮಳಿಗೆಗಳ ಮಾಲೀಕರು, ಮದ್ಯದಂಗಡಿಯ ಮಾಲೀಕರು ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಉಪಸ್ಥಿತರಿದ್ದರು.