ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಮೀಸಲಾತಿ ನಾಟಕ

ಭಾಲ್ಕಿ:ಮಾ.26: ಚುನಾವಣೆ ಹೊಸ್ತಿಲಲ್ಲಿ ಲಿಂಗಾಯಿತರಿಗೆ 3ಬಿ ಅಡಿ ಇದ್ದ ಶೇ.5ರ ಮೀಸಲನ್ನು ಈಗ 2 ಡಿ ಅಡಿ ಶೇ.7ಕ್ಕೆ ಹೆಚ್ಚಿಸಿ ತುಟಿಗೆ ತುಪ್ಪ ಸವರುವ ಕೆಲಸವನ್ನು ಸರಕಾರ ಮಾಡಿದೆ. ಇದು ಸಮುದಾಯಕ್ಕೆ ಮಾಡಿರುವ ಘೋರ ಅನ್ಯಾಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಗಳು ಆದ ಶಾಸಕ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನಾವು ಬೇರೆ ಸಮುದಾಯದ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದಿಗೂ ಕೇಳಿಲ್ಲ. ನಮ್ಮ ಬೇಡಿಕೆ ಇದ್ದಿದ್ದು ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತ ಸಮುದಾಯವನ್ನು ಸೇರಿಸಬೇಕು ಮತ್ತು ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಮೀಸಲು ಕಲ್ಪಿಸಬೇಕು ಎಂಬ ಒತ್ತಾಯವಿತ್ತು. ಆದರೆ, ಕೇವಲ ಶೇ.2ರಷ್ಟು ಮೀಸಲಾತಿ ಹೆಚ್ಚಳ ಮಾಡಿರುವುದರಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಮೀಸಲಾತಿ ಹೆಚ್ಚಳ ಮಾಡುವ ಮನಸ್ಸಿದ್ದರೆ, ಇಚ್ಛಾಶಕ್ತಿ ಇದ್ದರೆ, ಶೇ.50 ಗರಿಷ್ಠ ಮಿತಿಗಿಂತ ಹೆಚ್ಚು ಅಂದರೆ ಶೇ.75ರಷ್ಟು ಮೀಸಲು ಕಲ್ಪಿಸಿ, ಜನಸಂಖ್ಯೆಗಳನುಗುಣವಾಗಿ ಮೀಸಲು ಹೆಚ್ಚಿಸಲು 9ನೇ ಷೆಡ್ಯೂಲ್‍ನಲ್ಲಿ ಸೇರ್ಪಡೆ ಮಾಡಿಸಬೇಕು. ಅದು ಬಿಟ್ಟು, ನೀತಿ ಸಂಹಿತೆ ಜಾರಿ ಆಗುವ ಹೊತ್ತಿನಲ್ಲಿ ಇವರ ಮೀಸಲಾತಿ ಕಿತ್ತು, ಅವರಿಗೆ, ಅವರ ಮೀಸಲಾತಿಯ ಜಾಗದಲ್ಲಿ ಇವರಿಗೆ ಮೀಸಲು ಕಲ್ಪಿಸುವ ನಾಟಕವಾಗಿ ಗೊಂದಲ ಸೃಷ್ಟಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಇದು ಚುನಾವಣೆ ಗಿಮಿಕ್ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಶಿಫಾರಸಿನ ಪಾಲನೆಯೂ ಆಗಿಲ್ಲ, ನಿಯಮಗಳ ಪಾಲನೆಯೂ ಆಗಿಲ್ಲ. ಸುಮ್ಮನೆ ಕಾಟಾಚಾರಕ್ಕೆ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಮಾಡಿದಂತೆ ಮಾಡಿ, ಜನರ ಕಣ್ಣಿಗೆ ಮಣ್ಣೆರಚುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಇದು ಚುನಾವಣೆ ದೃಷ್ಟಿಯ ತೀರ್ಮಾನವಾಗಿದ್ದು, ಲಿಂಗಾಯಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೂ ಸರಕಾರ ಘೋರ ಅನ್ಯಾಯ ಮಾಡಲು ಹೊರಟಿದೆ. ಜನರ ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡದೆ, ಚುನಾವಣೆ ಸಂದರ್ಭದಲ್ಲಿ ನಾಟಕ ಆಡುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.