ಚುನಾವಣೆ ಸ್ಪರ್ಧೆಗೆ ನನ್ನಲ್ಲಿ ಹಣವಿಲ್ಲ: ನಿರ್ಮಲಾ

ನವದೆಹಲಿ,ಮಾ.೨೮- ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಷ್ಟು ಹಣ ತಮ್ಮಲ್ಲಿ ಇಲ್ಲ. ಹೀಗಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ಅಥವಾ ಆಂದ್ರಪ್ರದೇಶದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಪಕ್ಷ ಹೇಳಿತ್ತು. ಆದರೆ ಈಗಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಣ ಮುಖ್ಯ, ತಮ್ಮ ಬಳಿ ಅಷ್ಟೊಂದು ಪ್ರಮಾಣದ ಹಣ ಇಲ್ಲದ ಹಿನ್ನೆಲೆಯಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಭಾರತದ ಯಾವುದೇ ರಾಜ್ಯದಿಂದ ಬೇಕಾದರೂ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪಕ್ಷ ಸೂಚಿಸಿತ್ತು. ಈ ಸಂಬಂಧ ಹಲವು ದಿನಗಳ ಕಾಲ ಯೋಚಿಸಿ ನಿರ್ಧಾರಕ್ಕೆ ಬಂದಿದ್ದೇನೆ. ಜೊತೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎನ್ನುವ ವಿಷಯವನ್ನು ಪಕ್ಷದ ಅಧ್ಯಕ್ಷರಿಗೂ ತಿಳಿಸಿದ್ದೇನೆ ಎಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನ್ನ ಬಳಿ ಅಂತಹ ಹಣವಿಲ್ಲ, ನನಗೂ ಸಮಸ್ಯೆ ಇದೆ ಏಕೆಂದರೆ ಅದು ಆಂಧ್ರಪ್ರದೇಶ ಅಥವಾ ತಮಿಳುನಾಡು ಆಗಿರಲಿ, ಅವರು ಬಳಸುವ ವಿವಿಧ ಗೆಲುವಿನ ಮಾನದಂಡಗಳ ಪ್ರಶ್ನೆಯೂ ಇರುತ್ತದೆ, ನೀವು ಈ ಸಮುದಾಯದವರೇ ಅಥವಾ ಆ ಧರ್ಮದವರೇ ಎನ್ನುವುದು ಕೂಡ ಮುಖ್ಯವಾಗಲಿದೆ ಈ ಎಲ್ಲಾ ಕಾರಣದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನಿಮ್ಮ ಬಳಿ ಹಣವಿಲ್ಲವೇ ಎಂದು ಕೇಳುತ್ತಾರೆ. “ನನ್ನ ಸಂಬಳ, ನನ್ನ ಗಳಿಕೆ ಮತ್ತು ನನ್ನ ಉಳಿತಾಯ ನನ್ನದೇ ಹೊರತು ಭಾರತದ ಕನ್ಸಾಲಿಡೇಟೆಡ್ ಫಂಡ್ ಅಲ್ಲ ಎಂದು ಅವರು ಹೇಳಿದ್ಧಾರೆ. ೨೦೧೪ರಲ್ಲಿ ಆಂಧ್ರಪ್ರದೇಶವನ್ನು ಪ್ರತಿನಿಧಿಸಿ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಕೇಂದ್ರದಲ್ಲಿಹಣಕಾಸು ಮತ್ತು ಕಾಪೆರ್ರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸ್ವತಂತ್ರ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಸೀತಾರಾಮನ್ ಅವರು ೨೦೦೮ ರಿಂದ ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ೨೦೧೦ ರಿಂದ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ.
೧೯೫೯ರ ಆಗಸ್ಟ್ ೧೮ ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಅವರು ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸಾಮಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು ಮತ್ತು ಪಡೆದರು. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ಧಾರೆ.ಏಳು ಹಂತದ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ ೧೯ ರಂದು ಆರಂಭವಾಗಲಿದ್ದು, ಜೂನ್ ೪ ರಂದು ಫಲಿತಾಂಶ ಪ್ರಕಟವಾಗಲಿದೆ.