ಚುನಾವಣೆ ಸಂತೆಯಲ್ಲ, ಮತ ಮಾರಾಟಕ್ಕಲ್ಲ, ಬೀದಿನಾಟಕದ ಮೂಲಕ ಮತ ಜಾಗೃತಿ

ದಾವಣಗೆರೆ.ಮೇ.೧; ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಚುನಾವಣೆ ಸಂತೆಯಲ್ಲ, ಮತ ಮಾರಾಟಕ್ಕಿಲ್ಲ ಎಂಬ ಬೀದಿನಾಟಕದ ಮೂಲಕ ಮತದ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಲ್ಯಾಣ ರಾಜ್ಯ ವ್ಯವಸ್ಥೆ ನಮ್ಮದಾಗಿದ್ದು ಜನರ ಕಲ್ಯಾಣಕ್ಕೆ ಬೇಕಾಗುವ ಯೋಜನೆ ರೂಪಿಸುವ ಕೆಲಸವನ್ನು ಜನಪ್ರತಿನಿಧಿಗಳನ್ನು ಒಳಗೊಂಡ ಸರ್ಕಾರಗಳು ಮಾಡುತ್ತವೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಮತವನ್ನು ಮಾರಾಟ ಮಾಡಿಕೊಳ್ಳದೆ, ನೈತಿಕವಾದ ಮತದಾನ ಮಾಡುವುದರಿಂದ ಚುನಾವಣೆ ಪಾರದರ್ಶಕವಾಗಿ ನಡೆದು ಉತ್ತಮ, ಜನಪರ ಕಾಳಜಿಯುಳ್ಳವರು ಆಯ್ಕೆಯಾಗುವರು.  ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಬೀದಿನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಲಾವಿದರಾಗಿ ಭಾಗವಹಿಸಿದ್ದರು.ಜಿಪ್‌ಲೈನ್ ಮೂಲಕ ಜಾಗೃತಿ; ಪಾಲಿಕೆ ಆವರಣದಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆಯನ್ನು ಏರ್ಪಡಿಸಲಾಗಿತ್ತು. ಹಿಮಾಲಯ ಅಡ್ವೆಂಚರ್ ಗ್ರೂಫ್ ನಿಂದ 100 ಕ್ಕೂ ಹೆಚ್ಚಿನ ಸಾಹಸ ಕ್ರೀಡಾ ಪಟುಗಳು ಭಾಗವಹಿಸಿದ್ದರು. 50 ಮೀಟರ್ ಉದ್ದದ ಹಗ್ಗದಲ್ಲಿ ಹುಕ್ ಸಾಧನದಿಂದ ಹಗ್ಗವನ್ನು ಹಿಡಿದು ಭೂಮಿಯಿಂದ 35 ಅಡಿ ಎತ್ತರದಲ್ಲಿ ಮುಂದೆ ಸಾಗುವರು. ಸೊಂಟಕ್ಕೆ ಬೆಲ್ಟ್, ಹೆಲ್ಮೆಟ್ ಧರಿಸಿರುವರು. ಜಿಪ್‌ಲೈನ್‌ನಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ಸಾಹಸದಲ್ಲಿ ಭಾಗವಹಿಸಿದ್ದರು.