ಚುನಾವಣೆ ಯಶಸ್ವಿಗೆ ಅಧಿಕಾರಿ, ಸಿಬ್ಬಂದಿಗಳ ಸಹಕಾರ ಮುಖ್ಯ


ಧಾರವಾಡ, ಏ.24: ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿದೆ. ನಿಷ್ಪಕ್ಷಪಾತ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಾಳ. ಚುನಾವಣೆಗಳನ್ನು ವ್ಯವಸ್ಥಿತವಾಗಿ ಮತ್ತು ನಿಯಮಾನುಸಾರ ಸಂಘಟಿಸಲು ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರ ಅಗತ್ಯವಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ರಾಜ್ಯದಲ್ಲಿ ಅತೀ ಹೆಚ್ಚು ಯುವ ಮತದಾರರನ್ನು ಹೊಂದಿರುವ ಜಿಲ್ಲೆ ನಮ್ಮದಾಗಿದೆ. ಹಲವು ವಿಶೇಷತೆಗಳು ಜಿಲ್ಲೆಯಲ್ಲಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲರೂ ಸರಿಯಾದ ತರಬೇತಿ ಪಡೆದು, ಯಾವುದೇ ಗೊಂದಲ, ಸಂಶಯಗಳಿಗೆ ಅವಕಾಶ ಆಗದಂತೆ ಸಮರ್ಪಕವಾಗಿ ಮತ್ತು ಉತ್ತಮ ರೀತಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.
ಧಾರವಾಡ ತಹಸಿಲ್ದಾರ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ.ಮೋಹನ ಭಸ್ಮೆ ಅವರು ಮಾತನಾಡಿ, ಧಾರವಾಡ ಜಿಲ್ಕೆಯ ಏಳು ವಿಧಾನಸಭಾ ಮತಕ್ಷೇತ್ರಗಳಿಗೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳಿಗೆ ಈಗಾಗಲೇ ಮೊದಲ ಹಂತದ ತರಬೇತಿ ನೀಡಲಾಗಿದೆ. ಈ ತರಬೇತಿಯಲ್ಲಿ ಮತಯಂತ್ರಗಳ ಪ್ರಾತ್ಯಕ್ಷಿಕೆ ಮೂಲಕ ಹೆಚ್ಚಿನ ತಿಳುವಳಿಕೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಎಲ್ಲ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಖಿ, ಯುವ, ಎಥ್ನಿಕಲ್ (ಸಾಂಪ್ರದಾಯಿಕ ಕಲೆ) ಸೇರಿದಂತೆ ವಿಶೇಷ ಮತಗಟ್ಟಗಳನ್ನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ ನೇಮಕವಾಗುವ ಸಿಬ್ಬಂದಿಗಳು ಹೆಚ್ಚು ಉಲ್ಲಾಸ, ಆತ್ಮವಿಶ್ವಾಸದಿಂದ ಕೆಲಸ ಮಾಡಬಾಎಕೆಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಹಾಗೂ ಆಲೂರು ವೆಂಕಟರಾವ್ ಭವನದ ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ತರಬೇತಿದಾರರಾದ ತಹಸಿಲ್ದಾರ ಡಾ ಮೋಹನ ಭಸ್ಮೆ, ಭರತಕುಮಾರ ಚಂದನಕರ, ರವಿ ನಾಯಕ, ಸಿದ್ದು ಹುಲ್ಲಳ್ಳಿ, ರಾಘವೇಂದ್ರ, ಅರುಣ ಮತ್ತು ನರಸಿಂಹಮೂರ್ತಿ ಅವರು ವಿವುಧ ವಿಷಯಗಳ ಕುರಿತು ತರಬೇತಿ ನೀಡಿದರು. ಸುಮಾರು 400 ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿದ್ದರು.