
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.08: ಚುನಾವಣೆ ನಡೆಯುವವರೆಗೆ ಸಿಈಪಿಎಂಐಜಡ್ (ಕೆ.ಎಂ.ಆರ್.ಸಿ) ಯಡಿ ಕೈಗೊಳ್ಳಬೇಕಾದ ಯೋಜನೆಗಳ ಅನುಷ್ಟಾನ ತಡೆಯಬೇಕು ಎಂಬುದು ನಮ್ಮ ಒತ್ತಾಯ. ಏಕೆಂದರೆ ಇದನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು. ಗಣಿಭಾದಿತ ಪ್ರದೇಶದ ಅಭಿವೃದ್ದಿಗಾಗಿ ಮೀಸಲಿರುವ ಕೆಎಂಆರ್ ಸಿಯ 18 ಸಾವಿರ ಕೋಟಿ ರೂ ಗಳ ಹಣವನ್ನು ವಿವಿಧ ಯೋಜನೆಗಳ ಮೂಲಕ ಅನುಷ್ಟಾನಗೊಳಿಸಲು ವಿಳಂಬವಾಗಿದ್ದಕ್ಕೆ. ಸಮಾಜಪರಿವರ್ತನಾ ಸಮುದಾಯ ನ್ಯಾಯಾಲಯದ ಮೊರೆ ಹೋಗಿ ಆ ಹಣ ಬಳಕೆ ಮಾಡಲು ಕೋರಿತ್ತು. ಅದಕ್ಕೆ ನಿವೃತ್ತ ನ್ಯಾಯಾಧೀಶರಾದ ಸುದರ್ಶನರೆಡ್ಡಿ ನೇತೃತ್ವದ ಮೇಲ್ವಿಚಾರಣ ಸಮಿತಿಯನ್ನು ಸುಪ್ರೀಂಕೋರ್ಟು ನಿಯೋಜಿಸಿದೆ.
ಆದರೆ ಈ ಬಗ್ಗೆ ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರು ತಾವು ಸುಪ್ರೀಂ ಕೋರ್ಟಿಗೆ ಹೋಗಿ ಹಣ ಬಿಡುಗಡೆ ಮಾಡಿಸಿಕೊಂಡು ಬಂದಿದೆ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಅದಕ್ಕಾಗಿ ಚುನಾವಣೆವರೆಗೆ ಈ ಯೋಜನೆಗಳ ಅನುಷ್ಟಾನ ತಡೆಯಬೇಕೆಂದು ಮನವಿಸಲ್ಲಿಸಿದೆ ಎಂದರು.
ಕೆಎಂಆರ್ ಸಿ ಯಡಿ 151 ಯೋಜನೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ
ಬಳ್ಳಾರಿ ನಗರಕ್ಕೆ 271 ಕೋಟಿ ರೂ ಮಂಜೂರು ಮಾಡಿದೆ. ಸಂಡೂರು ಗಣಿ ಭಾಧಿತ ಆದರೆ ಬಳ್ಳಾರಿ ನಗರ ಅಲ್ಲ. ಆದರೂ ಈ ಹಣ ಮಂಜೂರು ಮಾಡಿರುವುದು ಸರಿಯಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದಿದ್ದರಿಂದ ಅದನ್ನು ಹಿಂಪಡೆದಿದೆಂದರು.
ಗಣಿ ಕಳ್ಳನಿಂದ ಮತ್ತೆ ರಾಜಕೀಯ:
ಗಣಿಕಳ್ಳ ಜನಾರ್ಧನರೆಡ್ಡಿ ನೈತಿಕತೆ ಇಲ್ಲದೆ ಹೊಸ ಪಕ್ಷ ಕಟ್ಟಿ ಮತ್ತೆ ಕರ್ನಾಟಕದ ರಾಜಕೀಯವನ್ನು ಕಲುಷಿತಗೊಳಿಸಲು ಬಂದಿದ್ದಾನೆ. ಆತನಿಗೆ, ಆತನ ಪಕ್ಷದಿಂದ ಸ್ಪರ್ಧೆ ಮಾಡಿದವರಿಗೆ ತಕ್ಕಪಾಠಕಲಿಸಿ ಎಂದರು.
ಭ್ರಷ್ಟಾಚಾರದ ಮಾಡಾಳ್:
ಕೋಟಿ ಕೋಟಿ ನಗದು ಹಣ ಭ್ರಷ್ಟಾಚಾರದಿಂದ ಸಂಪಾದಿಸಿದ್ದು ಲೋಕಾಯುಕ್ತರಿಗೆ ಸಿಕ್ಕರೂ. ಅದು ನನ್ನ ವ್ಯವಹಾರದಿಂದ ಬಂದಿದ್ದು ಎಂದು ಆರು ದಿನ ತಲೆ ಮರೆಸಿಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದ ಮುಖ ಎಂದರು.
ಲೋಕಾಯುಕ್ತಕ್ಕೂ ಅಂಧಶ್ರದ್ದೆ ಇಟ್ಟುಕೊಳ್ಳಬೇಕಿಲ್ಲ. ಈಹಿಂದೆ ಇದ್ದ ವಿಶ್ವನಾಥ ಶೆಟ್ಟಿ ಅಂತಹವರು ಜನಾರ್ಧನರೆಡ್ಡಿ, ಡಿ.ಕೆಶಿ ಅಂಥವರ ಹಲವು ಪ್ರಕರಣಗಳಲ್ಲಿ ಬಿ.ರಿಪೋರ್ಟ್ ಕೊಟ್ಟಿದ್ದಾರೆ. ಅದಕ್ಕಾಗಿ ಲೋಕಾಯುಕ್ತದ ಬಗ್ಗೆಯೂ ಒಂದು ಕಣ್ಣು ಇರಬೇಕಿದೆ ನಮ್ಮ ನಿಮ್ಮೆಲ್ಲೆರದು ಎಂದರು.
ಜಾಗೃತರಾಗಿ:
ಬಳ್ಳಾರಿಯಲ್ಲಿನ ಖನಿಜ ಸಂಪತ್ತನ್ನು ಉಳಿಸಿಕೊಳ್ಳಲು ಗಣಿಕಳ್ಳರಿಗೆ ರಾಜಕೀಯವಾಗಿ ಬೆಂಬಲ ನೀಡದೆ ಹೋರಾಟ ನಡೆಸಬೇಕು ಅದಕ್ಕೆ ನಮ್ಮ ಬೆಂಬಲ ಇದೆಂದರು.
ಸುದ್ದಿಗೋಷ್ಟಿಯಲ್ಲಿ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲದಹಳ್ಳಿ, ಶಿವಕುಮಾರ್, ಬಿ.ಎಸ್.ಮಲ್ಲಿಕಾರ್ಜುನ ಮೊದಲಾದವರು ಇದ್ದರು..