ಚುನಾವಣೆ ಮುಂದೂಡಲು ಆಗ್ರಹ


ಧಾರವಾಡ,ಎ.26: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಮಿತಿಮೀರಿದ್ದು, ಈ ಹಿನ್ನೆಲೆಯಲ್ಲಿ ಮೇ.9ರಂದು ನಡೆಯುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಘಟಕದ ಚುನಾವಣೆಯನ್ನು ಮುಂದೂಡುವಂತೆ ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಬರ್ಟ ದದ್ದಾಪುರಿ ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವೇಳೆ ರಾಜ್ಯ ಸರ್ಕಾರ ಚುನಾವಣೆ ಮುಂದೂಡದಿದ್ದರೆ, ರಾಜ್ಯದಲ್ಲಿ ಇನ್ನಷ್ಟು ಕೊರೊನಾ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ನಿತ್ಯ ಕೊರೋನಾ ಸೋಂಕು ಅಬ್ಬರದ ನಡುವೆ ಸಾಹಿತ್ಯ ಪರಿಷತ್ ಸದಸ್ಯರು ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದು, ಇದರಿಂದ ಅಮಾಯಕರು ಸೋಂಕಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಲಿದೆ. ಅಲ್ಲದೇ, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿರ್ಮೂಲನೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ದೂರಿದರು.
ಇತ್ತಿಚೇಗೆ ವಕ್ಕಲಿಗಾರ ಸಮಾಜದ ಚುನಾವಣೆ ನಡೆಸದಂತೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಕೊರೊನಾ ಹಾವಳಿ ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಬರುವ ತನಕ ಕೇಂದ್ರ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಘಟಕಗಳ ಚುನಾವಣೆ ಮುಂದೂಡಲು ಒತ್ತಾಯಿಸಿದರು.
ಈ ವೇಳೆ ಆನಂದ ಜಾಧವ ಮಾತನಾಡಿ, ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಮುಂದೂಡಲು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಹ ಆಯೋಗಕ್ಕೆ ಮನವಿ ಮಾಡಲು ಹೇಳಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.