ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಲಕ್ಷ್ಮೇಶ್ವರ,ಏ.9: ತಾಲ್ಲೂಕಿನ ಗೊಜನೂರು ಗ್ರಾಮದ ಗುಡ್ಡದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡುವುದರ ಮೂಲಕ ಗ್ರಾಮದಲ್ಲಿನ ವೀರಯೋಧ ಲಕ್ಷ್ಮಣ ಗೌರಣ್ಣವರ ಅವರ ಸಮಾಧಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂರು ದಶಕಗಳಿಂದ ಗುಡ್ಡದ ಎಡ ಮತ್ತು ಬಲ ಭಾಗದಲ್ಲಿ ಗ್ರಾಮದ ಅಂದಾಜು 400 ಜನರು ಮನೆ ಕಟ್ಟಿಕೊಂಡಿದ್ದಾರೆ. ಆದರೆ ಅವರಿಗೆ ಇನ್ನೂ ಸ್ಥಳೀಯ ಗ್ರಾಪಂ ಹಕ್ಕುಪತ್ರ ನೀಡುವ ಗೋಜಿಗೆ ಹೋಗಿಲ್ಲ. ನಿವಾಸಿಗಳು ಆಗಾಗ ಪ್ರತಿಭಟನೆ ನಡೆಸುತ್ತಲೇ ಇದ್ದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ. ಕಾರಣ ಹಕ್ಕುಪತ್ರ ನೀಡದಿದ್ದರೆ ಈ ಬಾರಿಯ ಚುನಾವಣೆಯಲ್ಲಿ ನಾವು ಮತ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಪುರುಷರು ಮಹಿಳೆಯರು ಟೆಂಟ್ ಹಾಕಿಕೊಂಡು ಪ್ರತಿಭಟನೆಗೆ ಮುಂದಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ ಕೆ.ಆನಂದಶೀಲ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪಿಎಸ್‍ಐ ಡಿ.ಪ್ರಕಾಶ ಮತ್ತು ಸಿಬ್ಬಂದಿ ಇದ್ದರು.
ಚೇತನ ಕಣವಿ, ನಿಂಗನಗೌಡ ದೊಡ್ಡಗೌಡ್ರ, ಮಾಬುಸಾಬ್ ದೊಡ್ಡಮನಿ, ಕರಿಯಪ್ಪ ಸಂಶಿ, ಶೇಖರಗೌಡ ಬಾಗವಾಡ, ಶಂಕ್ರಪ್ಪ ಸವಣೂರು, ಮಂಜುಳಾ ದೊಡ್ಡಗೌಡ್ರ, ಗೀತಾ ದೊಡ್ಡಗೌಡ್ರ, ನಾಗವ್ವ ಪೂಜಾರ, ಹೂವನಗೌಡ ದೊಡ್ಡಗೌಡ್ರ, ಮಹಾಂತಗೌಡ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
**