ಚುನಾವಣೆ ಬಂದರೆ ಕೈಗೆ ಜ್ವರ ಸಿದ್ದುಗೆ ಎಚ್‌ಡಿಕೆ ಟಾಂಗ್

ಬೆಂಗಳೂರು,ಡಿ.೮- ಸುಳ್ಳು ಸ್ಲೋಗನ್‌ಗಳ ಸೃಷ್ಟಿಕರ್ತ ಟರ್ಮಿನೇಟರ್ ಸಿದ್ಧ ಕಲೆಯ ನಿಪುಣಾಗ್ರೇಸರು ಈಗ ಜೆಡಿಎಫ್ (ಜೆಡಿಎಸ್ ಫ್ಯಾಮಿಲಿ) ಎಂಬ ಜಪ ಮಾಡಿಕೊಂಡು ಜಾತ್ಯಾತೀತ ತತ್ವಾದರ್ಶಗಳಿಗೆ ಎಳ್ಳು-ನೀರು ಬಿಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಜಾತಿ ಸಹಕಾರಕ್ಕೆ ಮೊರೆ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮಂಡ್ಯದಲ್ಲಿ ಸಿದ್ಧ ಕಲೆಯ ನಿಪುಣಾಗ್ರೇಸರು ಜಾತ್ಯಾತೀತ ತತ್ವಾದರ್ಶಗಳಿಗೆ ಎಳ್ಳು-ನೀರು ಬಿಟ್ಟು ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ಜಾತಿ ಸಹಕಾರಕ್ಕೆ ಮೊರೆ ಹೋಗಿದ್ದಾರೆ. ಅಯ್ಯೋ ಎಂಥಾ ದುರ್ವಿದಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮತ ಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ಜಾತ್ಯಾತೀತ ಶೂರನ ಅಸಲಿ ರೂಪ ಕಳಚಿದೆ ಎಂದೂ ಅವರು ಸಿದ್ದರಾಮಯ್ಯ ವಿರುದ್ಧ ಟ್ಟಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಮುದಾಯದ ಅಧ್ಯಕ್ಷರೊಬ್ಬರು ನೀವು ಮತ ಹಾಕುವುದು ಕಾಂಗ್ರೆಸ್ ಪಕ್ಷಕಲ್ಲ. ನಮ್ಮ ಸಮುದಾಯದ ಸಿದ್ಧ ಕಲಾಕೋವಿದನಿಗೆ ಎಂದು ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜ್ಬೂತ್ ಆಗಿ ನಡೆದಿದೆ. ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಡಿ.ಕೆ ಶಿವಕುಮಾರ್ ವಿರುದ್ಧವು ಹರಿಹಾಯ್ದಿದ್ದಾರೆ.
ಚುನಾವಣೆ ಬಂದರೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಚಳಿಜ್ವರ ಹತ್ತುತ್ತದೆ. ಈ ಜ್ವರ ಬಿಡಿಸಿಕೊಳ್ಳಲು ಸಿದ್ಧ ಸೂತ್ರಧಾರ ಬಳಸುವ ಹೊಸ ಔಷಧವೆ ಜೆಡಿಎಫ್ ಅವರನ್ನು ಉಳಿಸುವ ಟಾನಿಕ್‌ನ ಹೆಸರೇ ಜೆಡಿಎಸ್ ಕುಟುಂಬ ರಾಜಕಾರಣ, ಹಾಗಾದರೆ ಅವರದ್ದು ಎಸ್‌ಸಿಎಫ್ ಸಿದ್ದ ಸೂತ್ರಧಾರ ಕಾಂಗ್ರೆಸ್ ಫ್ಯಾಮಿಲಿ ಅಲ್ಲವೇ ಎಂದು ಕುಮಾರಸ್ವಾಮಿ ಟ್ವಿಟರ್‌ನಲ್ಲಿಹೇಳಿದ್ದಾರೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಭಜನೆ ಮಾಡುವವರು ಸಹಕಾರ ಸಚಿವರ ಸಹಾಯಕನನ್ನು ಅಭ್ಯರ್ಥಿ ಮಾಡಿದ್ದು, ಯಾರಿಗೆ ಸಹಕಾರ ನೀಡಲಿಕ್ಕೆ. ಜಾತ್ಯಾತೀತತೆಯ ಮುಖವಾಡ ಹಾಕಿಕೊಂಡು ಬಿಜೆಪಿಯನ್ನು ಬೈಯುವವರು ಬಿಜೆಪಿಯ ಸಚಿವರ ಪಿಎಗೆ ಟಿಕೇಟ್ ಕೊಟ್ಟಿದ್ದರ ಒಳಲೆಕ್ಕ ಏನು, ಇದು ಯಾರ ಲೆಕ್ಕ ಚುಕ್ತ ಮಾಡಲಿಕ್ಕೆ. ಇದೆಂಥಾ ಒಳ ಒಪ್ಪಂದ ಎಂದು ಅವರು ಪ್ರಶ್ನಿಸಿದ್ದಾರೆ.
ಜಾತ್ಯಾತೀತತೆಯ ಜಗಜಟ್ಟಿ ಮೈಸೂರಿನಲ್ಲಿ ಮಾಡಿದ ಜಾತಿ ರಾಜಕಾರಣ ಗೊತ್ತಿದೆ. ‘ಸಂದೇಶ ಸನ್ನಿಧಿಯಲ್ಲಿ ಕೂತು ಕಾಂಗ್ರೆಸ್ ಮತದಾರರ ೨ನೇ ಪ್ರಾಶಸ್ತ್ಯದ ಮತಗಳು ಬಿಜೆಪಿಗೇ ಹೋಗಬೇಕು, ಜೆಡಿಎಸ್‌ಗಲ್ಲ ಎಂದು ಫರ್ಮಾನು ಹೊರಡಿಸಿದ’ ಚಾಮುಂಡೇಶ್ವರಿ ಕ್ಷೇತ್ರ ತಿರಸ್ಕೃತ ಸುಳ್ಳು ಸ್ಲೋಗನ್‌ಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿ ಬಿದ್ದಿದೆ ಎಂದು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಟೀಕಿಸಿದ್ದಾರೆ.
ರಾಜಕೀಯ ಆರಂಭಿಸಿದ ಮಾತೃ ಪಕ್ಷವನ್ನೇ ಕ್ರೂರವಾಗಿ ಮುಳುಗಿಸಲು ಹೊರಟ ಆ ನಾಯಕರು ಕೈ ಹಿಡಿದ ಸ್ವಪಕ್ಷವನ್ನು ಸ್ವಾಹಃ ಮಾಡುತ್ತಿದ್ದಾರೆ. ‘ವಿನಾಶಕಾಲೆ ವಿಪರೀತ ಸುಳ್ಳು’ ಆ ಸುಳ್ಳುಗಳೇ ಅವರನ್ನು ಸುಡುತ್ತವೆ. ಆಟ ಈಗ ಆರಂಭ ಎಂದು ಕಉಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.