ಚುನಾವಣೆ ಪ್ರಚಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ: ಜಿಲ್ಲಾಧಿಕಾರಿ


ಬಳ್ಳಾರಿ,ಮೇ 04- ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರಲ್ಲಿ ಸ್ಪರ್ಧಿಸುತ್ತಿರುವ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಮತ್ತು ಉಮೇದುವಾರರು, ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ಭಾಷಣದ  ವೇಳೆ ಅನುಚಿತ ಭಾಷೆ ಹಾಗೂ ವೈಯಕ್ತಿಕ ಟೀಕೆ ಮಾಡಬಾರದು. ಶಬ್ದ ಬಳಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಚುನಾವಣಾ ವಾತಾವರಣವನ್ನು ಹಾಳುಮಾಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಪ್ರಚಾರ ಭಾಷಣ ಮಾಡುವಾಗ ಬಳಸುವ ಪದಗಳು ಮತ್ತು ವಿಷಯಗಳು ಚುನಾವಣಾ ಆಯೋಗವು ನಿಗದಿ ಪಡಿಸಿರುವ ಮಾದರಿ ನೀತಿ ಸಂಹಿತೆಯಲ್ಲಿನ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಮತ್ತು ಪ್ರಚಾರವನ್ನು ಕೇವಲ ವಿಷಯ ಆಧಾರಿತ ಮತ್ತು ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಿ ಪ್ರಚಾರದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಬೇಕು. ಸಮಾಜದ ಎಲ್ಲಾ ವರ್ಗದ ಮತದಾರರು ನಿರ್ಭೀತವಾಗಿ ಮತ್ತು ಮುಕ್ತವಾಗಿ ಮತ ಚಲಾಯಿಸುವಂತೆ ಚುನಾವಣಾ ವಾತಾವರಣವನ್ನು ಕಲ್ಪಿಸಲು ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು.
ನಾವಣಾ ನೀತಿ ಸಂಹಿತೆಯಂತೆ ಪ್ರಚಾರದ ವೇಳೆಯಲ್ಲಿ ಪ್ರಚೋದನಕಾರಿ ಹಾಗೂ ಉದ್ವಿಗ್ನತೆ ಉಂಟುಮಾಡುವ, ಅಂಕೆ ಇಲ್ಲದ ಬೈಗುಳಗಳನ್ನು ಅಥವಾ ಹೇಳಿಕೆಗಳನ್ನು, ಸಭ್ಯತೆ ಮೀರಿದ ಹಾಗೂ ಎದುರಾಳಿ ಸ್ಪರ್ಧಿಗಳ ವೈಯಕ್ತಿಕ ನಡವಳಿಕೆ ಹಾಗೂ ಗುಣಗಳ ಬಗ್ಗೆ  ಹೇಳಿಕೆಗಳನ್ನು ನೀಡಿ ಮುಕ್ತ ಹಾಗೂ ಪಾರದರ್ಶಕ ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸಬಾರದು ಎಂದು ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.
ಚುನಾವಣಾ ನೀತಿಸಂಹಿತೆಗಳ ನಿಬಂಧನೆಗಳು:
ಅನ್ಯವ್ಯಕ್ತಿಗಳ ಚಟುವಟಿಕೆಗಳು ಹಾಗೂ ನಡವಳಿಕೆಗಳ ಮೇಲೆ ಹೇಳಿಕೆ ನೀಡುವುದು ಅವರ ವೈಯಕ್ತಿಕ ಜೀವನದ ಮೇಲಿನ ಅಪಪ್ರಚಾರ ಆಗುತ್ತದೆ.  ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು ಸಾರ್ವಜನಿಕ ಜೀವನಕ್ಕೆ ಸಂಬಂದಿಸದೇ ಇರುವ ರಾಜಕೀಯ ಮುಖಂಡರ, ಕಾರ್ಯಕರ್ತರ ಖಾಸಗಿ ಜೀವನದ ಅಂಶಗಳಿಗೆ ಸಂಬಂಧಿಸಿದಂತೆ ಟೀಕೆ ಮಾಡಬಾರದು ಮತ್ತು ಹಾಲಿ ಇರುವ ವಿವಾದಗಳು ಉಲ್ಬಣಗೊಳ್ಳುವ ಮತ್ತು ಪರಸ್ಪರ ಘರ್ಷಣೆಗೆ ಅನುವು ಮಾಡಿಕೊಡುವ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ತೊಡಗಬಾರದು.
ಚುನಾವಣಾ ಪ್ರಚಾರದ ಗರಿಷ್ಟ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಚುನಾವಣಾ ನೀತಿಸಂಹಿತೆಗಳನ್ನು ಪದೇ ಪದೇ ಉಲ್ಲಂಘನೆ ಮಾಡುವ ಚಟುವಟಿಕೆಯಲ್ಲಿ ತೊಡಗಿದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ವಿರುದ್ದ ಆಯೋಗವು ಕ್ರಮ ತೆಗೆದುಕೊಳ್ಳಲು ಅವಕಾಶ ವಿರುತ್ತದೆ. ವಿವಿಧ ಜಾತಿಗಳು, ಕೋಮುಗಳು, ಧರ್ಮಗಳು ಮತ್ತು ಭಾಷೆಗಳ ಜನರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಕಲುಷಿತಗೊಳಿಸುವ ಮತ್ತು ಘರ್ಷಣೆ ಉಂಟುಮಾಡುವ ಚಟುವಟಿಕೆಗಳಲ್ಲಿ ಯಾವುದೇ ರಾಜಕೀಯ ಪಕ್ಷ ಇಲ್ಲವೆ ಅಭ್ಯರ್ಥಿಯು ತೊಡಗುವಂತಿಲ್ಲ. ಆಧಾರ ರಹಿತ ದೂರುಗಳು ಮತ್ತು ಅಸ್ಪಷ್ಟ ವಿಷಯಗಳನ್ನು ಆಧರಿಸಿ ಎದುರಾಳಿ ಸ್ಪರ್ಧಿಗಳ ಮತ್ತು ಅವರ ಕಾರ್ಯಕರ್ತರ ಬಗ್ಗೆ ಟೀಕಿಸುವಂತಿಲ್ಲ.
 ಅಪರಾಧಗಳೆಂದು ಪರಿಗಣಿಸುವ ಅಂಶಗಳು:
ಚುನಾವಣೆಗೆ ಸಂಬಂಧಿಸಿದಂತೆ ತಪ್ಪು ಮತ್ತು ಅಧಾರ ರಹಿತ ಹೇಳಿಕೆಗಳನ್ನು ನೀಡುವುದು ಅಪರಾಧವೆಂದು ಪರಿಗಣಿಸಲಾಗುವುದು. ಯಾವುದೇ ವ್ಯಕ್ತಿಯ ಅವಹೇಳನ, ಮಾನಹಾನಿ ಮಾಡುವ ಪದಗಳನ್ನು ಬಳಸುವುದು ಅಥವಾ ಬರೆಯುವುದು ಅಥವಾ ಸನ್ನೆಗಳ ಮೂಲಕ ಇಲ್ಲವೇ ಕಣ್ಣಿಗೆ ಕಾಣುವ ರೀತಿಯಲ್ಲಿ ವ್ಯಕ್ತಪಡಿಸುವುದು ಅಥವಾ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಬೇರೆಯವರನ್ನು ಅವಹೇಳನಕಾರಿಯಾಗಿ ಮಾನನಷ್ಟಕ್ಕೆ ಗುರಿಪಡಿಸಿದಲ್ಲಿ ಅಂತಹ ವ್ಯಕ್ತಿಗಳಿಗೆ 2ವರ್ಷದ ಅವಧಿಗೆ ಸೆರೆವಾಸ ಇಲ್ಲವೇ ದಂಡ ಹಾಕಲು ಅಥವಾ ಸೆರೆವಾಸ ಮತ್ತು ದಂಡ ಎರಡನ್ನು ವಿದಿಸಲು ಅವಕಾಶ ಕಲ್ಪಿಸಲಾಗಿದೆ.
ಉದ್ದೇಶಪೂರ್ವಕವಾಗಿ ಅವಮಾನ ಮತ್ತು ಯಾವುದೇ ವ್ಯಕ್ತಿಯನ್ನು ಉದ್ರೇಕಿಸುವ ಮತ್ತು ಈ ರೀತಿ ಮಾಡುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವಂತೆ ಅಪರಾದವೆಸಗುವ ವ್ಯಕ್ತಿಗಳಿಗೆ 2ವರ್ಷದ ಅವಧಿಗೆ ಸೆರೆವಾಸ ಇಲ್ಲವೇ ದಂಡ ಹಾಕಲು ಅಥವಾ ಸೆರೆವಾಸ ಮತ್ತು ದಂಡ ಎರಡನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಜಾಗತೀಕ ಮಟ್ಟದಲ್ಲಿ ಭಾರತದ ಪ್ರಜಾಸತ್ತೆಯು ಹೊಂದಿರುವ ಉತ್ತಮ ಮಟ್ಟವನ್ನು ಎತ್ತಿ ಹಿಡಿಯುವಲ್ಲಿ ಸಹಕಾರ ನೀಡಿ ಚುನಾವಣಾ ಪ್ರಚಾರವನ್ನು ಕೈಕೊಳ್ಳಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.