ಚುನಾವಣೆ ಪ್ರಕ್ರಿಯೆ ಸಮಗ್ರ ಜ್ಞಾನ ಹೊಂದಿ ಪಾರದರ್ಶಕ ಚುನಾವಣೆಗೆ ಸನ್ನದ್ಧರಾಗಲು ಕರೆ

ವಿಜಯಪುರ:ಮಾ.24: ಮುಂಬರುವ ಚುನಾವಣೆಗೆ ನಿಯೋಜಿತ ಸೆಕ್ಟರ್ ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಕ್ಲೀಷ್ಟಕರ ಹಾಗೂ ಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲ್ಯ ರೂಢಿಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆ ಬಗ್ಗೆ ಸಮಗ್ರ ಜ್ಞಾನ ಹೊಂದುವ ಮೂಲಕ ಪಾರದರ್ಶಕ ಚುನಾವಣೆಗೆ ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಮತದಾನ ಪೂರ್ವಸಿದ್ಧತೆ ಹಾಗೂ ಚುನಾವಣೆಗೆ ನಿಯೋಜಿತ 29-ಬಬಲೇಶ್ವ್ವರ, 30-ಬಿಜಾಪುರ ನಗರÀ, 31-ನಾಗಠಾಣ ಮತಕ್ಷೇತ್ರದ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಯೋಜಿತ ಅಧಿಕಾರಿಗಳು ಆಯೋಗದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಆಯೋಜಿಸಲಾದ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮತಗಟ್ಟೆ ವ್ಯಾಪ್ತಿ ಸೇರಿದಂತೆ ಸಿಬ್ಬಂದಿ ಮತಗಟ್ಟೆಯಲ್ಲಿನ ಮೂಲ ಸೌಕರ್ಯಗಳ ನಿಖರ ಮಾಹಿತಿ ಹೊಂದಿರಬೇಕು. ಗೊಂದಲವಿದ್ದರೆ ತರಬೇತಿಯಲ್ಲಿ ಪರಿಹರಿಸಿಕೊಳ್ಳಬೇಕು. ಸೆಕ್ಟರ್ ಅಧಿಕಾರಿಗಳು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಮತಗಟ್ಟೆಗಳ ಮತದಾನ ಪೂರ್ವ ಸಿದ್ಧತೆ, ಮಸ್ಟರಿಂಗ್, ಡಿಮಸ್ಟರಿಂಗ್ ತರಬೇತಿ, ಮತಗಟ್ಟೆ ವ್ಯಾಪ್ತಿಯಲ್ಲಿನ ಮತದಾರರಿಗೆ ವಿದ್ಯುನ್ಮಾಬನ ಮತಯಂತ್ರಗಳಲ್ಲಿ ಮತಗಳನ್ನು ದಾಖಲಿಸುವ ಅಣುಕು ಮತದಾನಗಳನ್ನು ನಡೆಸಿ ನಮೂನೆ ಸಲ್ಲಿಸುವುದು. ಮತದಾನಪೂರ್ವ ತಯಾರಿ, ಮತಗಟ್ಟೆಗಳ ಭೌತಿಕ ತಪಾಸಣೆ, ಸೆಕ್ಟರ್ ವ್ಯಾಪ್ತಿಯ ಸಿಬ್ಬಂದಿಗಳಿಗೆ ತರಬೇತಿ, ಮತಗಟ್ಟೆ ಅಧಿಕಾರಿಗಳಿಗೆ ಸಹಾಯ-ಸಹಕಾರ ಒದಗಿಸುವುದು. ಸೇರಿದಂತೆ ಚುನಾವಣಾ ಆಯೊಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ದುರ್ಬಲ ಮತದಾರರ ಗುರುತಿಸಿ, ಮತದಾನಕ್ಕೆ ಸಹಕರಿಸಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಸಂಪೂರ್ಣ ಅರಿವು ಹೊಂದಬೇಕು. ಇವಿಎಂ ಅತಿಸೂಕ್ಷ್ಮವಾಗಿರುವುದರಿಂದ ಇವಿಎಂ ಬಗ್ಗೆ ಜಾಗೃತಿ ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕು. ಇವಿಎಂ ರಕ್ಷಣೆಗೆ ಅಗತ್ಯ ಗಮನ ಹರಿಸಬೇಕು. ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ತೆರಳುವ ಕುರಿತು ದಾರಿ (ರೂಟ್ ಮ್ಯಾಪ್) ಹಾಗೂ ಮತಗಟ್ಟೆ ತಲುಪುವ ಗರಿಷ್ಠ ಮತ್ತು ಕನಿಷ್ಠ ಸಮುಯ ಅರಿತುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಸಂವಹನ ಸಾಧಿಸಲು ಎಲ್ಲ ಸಂಪರ್ಕ ಸಂಖ್ಯೆ ಹೊಂದಿರಬೇಕು. ಒಟ್ಟಾರೆ ಚುನಾವಣಾ ಪ್ರಕ್ರಿಯೆ ಕುರಿತು ಅಗತ್ಯ ತರಬೇತಿ ಪಡೆದು, ಮುಂಬರುವ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲು ಸನ್ನದ್ಧರಾಗುವಂತೆ ಅವರು ಹೇಳಿದರು.

ಚುನಾವಣಾ ಕಾರ್ಯಕ್ಕೆ ನಿಯೋಜಿತ ಸೆಕ್ಟರ್ ಅಧಿಕಾರಿಗಳಿಗೆ ಪಿಪಿಟಿ ಮೂಲಕ ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಶಿರಹಟ್ಟಿಮಠ, ನಾಗಠಾಣ ವಿಧಾನಸಭಾ ಕ್ಷೇತ್ರದ ನಿರ್ವಾಚಣಾಧಿಕಾರಿ ಸತ್ಯನಾರಾಯಣ ಭಟ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ಸೆಕ್ಟರ್ ಅಧಿಕಾರಿಗಳು ಉಪಸ್ಥಿತರಿದ್ದರು.