
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ. 4 :- ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದ್ದು ನೀತಿಸಂಹಿತೆ ಜಾರಿಯಲ್ಲಿರುವುದರಿಂದ ನಾಳೆ ಹಸಿರು ಕ್ರಾಂತಿಯ ಹರಿಕಾರ ಡಾ ಬಾಬು ಜಗಜೀವನರಾಂ ಅವರ 116ನೇ ಜನ್ಮದಿನಾಚರಣೆ ಹಾಗೂ ಏಪ್ರಿಲ್ 14ರಂದು ಭಾರತ ದೇಶದ ಸಂವಿಧಾನ ಶಿಲ್ಪಿ ಹಾಗೂ ದಲಿತರ ಆಶಾಕಿರಣ ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರ 132ನೇ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಅಧ್ಯಕ್ಷರು ಆದ ಟಿ ಜಗದೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಡಾ ಬಾಬು ಜಗಜೀವನರಾಂ ಅವರ ಜಯಂತಿ ಹಾಗೂ ಏಪ್ರಿಲ್ 14ರಂದು ಬಾಬಾಸಾಹೇಬ ಡಾ ಬಿ ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆ ದಿನದ ಬೆಳಿಗ್ಗೆ 10ಗಂಟೆಗೆ ಕೂಡ್ಲಿಗಿ ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆವತಿಯಿಂದ ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ಅವರುಗಳ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಮಾಡುವ ಮುಖಾಂತರ ಸರಳವಾಗಿ ಆಚರಿಸಲಾಗುವುದು ಅಲ್ಲದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಾಲಂಕಾರ, ಶಾಲಾಕಾಲೇಜುಗಳಲ್ಲಿ, ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಕಡ್ಡಾಯವಾಗಿ ಮಹಾನ್ ಪುರುಷರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗೌರವಿಸುವಂತೆ ತಹಸೀಲ್ದಾರ್ ಟಿ ಜಗದೀಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.